ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಮೂಲಕ ಸ್ಪಷ್ಟನೆ ನೀಡುತ್ತಿದ್ದ ಯುವತಿ ಇಂದು ವಿಚಾರಣೆಗೆ ಹಾಜರಾಗಲಿದ್ದಾರೆ. ಎಸ್ಐಟಿ ಎದುರು ವಿಚಾರಣೆಗೆ ಹಾಜರಾಗಲು ಯುವತಿಗೆ ನೋಟಿಸ್ ನೀಡಿದ್ದು, ನ್ಯಾಯಾಧೀಶರ ಎದುರು ಯುವತಿ ಹಾಜರಾಗಿ ಹೇಳಿಕೆ ನೀಡಲಿದ್ದಾರೆ ಎನ್ನಲಾಗಿದೆ.
ಈ ನಡುವೆ ಯುವತಿ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದಾರೆ. ನಿಮ್ಮ ಮೇಲುಸ್ತುವಾರಿಯಲ್ಲಿ ಎಸ್ಐಟಿ ತನಿಖೆಯಾಗಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಸಿಡಿ ಯುವತಿ ಪತ್ರ ಬರೆದಿದ್ದಾರೆ.
ಇ -ಮೇಲ್ ಮೂಲಕ ಪತ್ರ ಕಳುಹಿಸಿದ್ದು, ನಮ್ಮ ಪೋಷಕರಿಂದ ಬಲವಂತವಾಗಿ ಹೇಳಿಕೆ ಪಡೆದುಕೊಳ್ಳಲಾಗಿದೆ. ರಮೇಶ್ ಜಾರಕಿಹೊಳಿ ಪ್ರಭಾವಿ ವ್ಯಕ್ತಿಯಾಗಿದ್ದಾರೆ. ಪೋಷಕರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿದ್ದಾರೆ. ನನಗೆ, ನಮ್ಮ ಕುಟುಂಬದವರಿಗೆ ರಕ್ಷಣೆ ನೀಡಬೇಕು. ನಿಮ್ಮ ಮೇಲುಸ್ತುವಾರಿಯಲ್ಲಿ ಎಸ್ಐಟಿ ತನಿಖೆಯಾಗಬೇಕು ಎಂದು ಮನವಿ ಮಾಡಿದ್ದು, ಪತ್ರದಲ್ಲಿ ಹಲವು ಆರೋಪ ಮಾಡಿದ್ದಾರೆನ್ನಲಾಗಿದೆ.