ಜೈಲಿನ ಕೋಣೆಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿರುವುದನ್ನು ತೆಗೆಯದಿದ್ದರೆ ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹ ಮಾಡುವುದಾಗಿ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್ ಜಿ.ಎನ್. ಸಾಯಿಬಾಬಾ ಬೆದರಿಕೆ ಹಾಕಿದ್ದಾರೆ.
ನಾಗ್ಪುರದಲ್ಲಿ ಮಾವೋವಾದಿಗಳಿಗೆ ಬೆಂಬಲ ನೀಡುತ್ತಿದ್ದರು ಎಂಬ ಆರೋಪದಲ್ಲಿ ನಾಗ್ಪುರ ಸೆಂಟ್ರಲ್ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸಾಯಿಬಾಬಾ, ಸಿಸಿ ಟಿವಿ ಕ್ಯಾಮೆರಾ ಅಳವಡಿಸಿರುವುದರಿಂದ ಅದರಲ್ಲಿ ಶೌಚಾಲಯ ಮತ್ತು ಬಾತ್ ರೂಂ ಪ್ರದೇಶದ ಚಿತ್ರಣಗಳೂ ಸೆರೆ ಆಗಲಿವೆ. ಇದರಿಂದ ನನ್ನ ವೈಯಕ್ತಿಕ ಗೌರವಕ್ಕೆ ಧಕ್ಕೆ ಆಗಲಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಸಾಯಿಬಾಬಾ ಪತ್ನಿ ಮತ್ತು ಅವರ ಸಹೋದರ ಮಹಾರಾಷ್ಟ್ರ ಗೃಹ ಸಚಿವರಿಗೆ ಪತ್ರ ಬರೆದು ತಕ್ಷಣವೇ ಸಿಸಿ ಟಿವಿ ಕ್ಯಾಮೆರಾವನ್ನು ತೆಗೆಯುವಂತೆ ಮನವಿ ಮಾಡಿದ್ದಾರೆ.
ಕಳೆದ ಮಂಗಳವಾರ ಜೈಲಿನ ಅಧಿಕಾರಿಗಳು ನನ್ನ ಪತಿಯ ಜೈಲು ಕೋಣೆಯ ಸಮೀಪ ವೈಡ್ ಆ್ಯಂಗಲ್ ನ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಇದರಲ್ಲಿ ಶೌಚಾಲಯ, ಸ್ನಾನ ಮಾಡುವ ಸ್ಥಳ ಮತ್ತು ಕೋಣೆಯ ಎಲ್ಲಾ ಭಾಗಗಳನ್ನೂ ಸೆರೆ ಹಿಡಿಯುವ ಸಾಮರ್ಥ್ಯವಿದೆ.
ಈ ಹಿನ್ನೆಲೆಯಲ್ಲಿ ನನ್ನ ಪತಿ ಮೂತ್ರ ವಿಸರ್ಜನೆ ಮಾಡುವುದಾಗಲೀ, ಸ್ನಾನ ಮಾಡುವುದಾಗಲೀ ಕಷ್ಟವಾಗುತ್ತದೆ. ದಿನದ 24 ಗಂಟೆಯೂ ಈ ಕ್ಯಾಮೆರಾ ಸಕ್ರಿಯವಾಗಿರುವುದರಿಂದ ಪ್ರತಿಯೊಂದು ದೃಶ್ಯವೂ ಸೆರೆ ಆಗಲಿದ್ದು, ಪತಿಯು ನಿತ್ಯ ಕರ್ಮಗಳನ್ನು ಕೈಗೊಳ್ಳುವುದು ದುಸ್ತರವಾಗಿದೆ. ಆದ್ದರಿಂದ ಕ್ಯಾಮೆರಾವನ್ನು ತೆಗೆಯಬೇಕೆಂದು ಸಾಯಿಬಾಬಾ ಪತ್ನಿ ವಸಂತಕುಮಾರಿ ಗೃಹಸಚಿವರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.