ಮಂಗಳೂರು: ನಿಷೇಧಿತ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ನೈಜೀರಿಯಾ ವ್ಯಕ್ತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಸುಮಾರು 6 ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಆರೋಪಿಯಿಂದ 6 ಕೆಜಿ 310 ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.
ನೈಜೀರಿಯಾದ ಎನಗೂ ಪ್ರಾಂತ್ಯದ ಪೀಟರ್ ಐಕೆಡಿ ಬೆಲೆನೋವು(38) ಬಂಧಿತ ಆರೋಪಿ. ಬೆಂಗಳೂರಿನ ಸೂಲಿಕುಂಟೆಯ ಬಾಡಿಗೆ ಮನೆಯಲ್ಲಿ ಈತ ವಾಸವಾಗಿದ್ದ. ಮಂಗಳೂರಿನಲ್ಲಿ ಪೊಲೀಸರು ಮಾದಕ ದ್ರವ್ಯ ಪೂರೈಸುವವರ ಮೇಲೆ ನಿಗಾ ವಹಿಸಿದ್ದು, ಪಂಪ್ ವೆಲ್ ನಲ್ಲಿ ಮಾದಕ ದ್ರವ್ಯ ಮಾರಾಟದಲ್ಲಿ ತೊಡಗಿದ್ದ ಹೈದರ್ ಅಲಿ(51) ಎಂಬುವನನ್ನು ಸೆ. 29ರಂದು ಬಂಧಿಸಲಾಗಿತ್ತು. ಆತ ಬೆಂಗಳೂರಿನ ಪೀಟರ್ ನಿಂದ ಖರೀದಿಸಿದ್ದ ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು.
ಸಿಸಿಬಿ ಪೊಲೀಸರ ತಂಡ ಪೀಟರ್ ವಾಸವಾಗಿದ್ದ ಬಾಡಿಗೆ ಮನೆಯಲ್ಲಿ ತಪಾಸಣೆ ನಡೆಸಿ ಮೂರು ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪಕ ಯಂತ್ರ, 35 ಎಟಿಎಂ ಕಾರ್ಡ್, 17 ಸಿಮ್ ಕಾರ್ಡ್, 10 ಬ್ಯಾಂಕ್ ಪಾಸ್ ಬುಕ್ ಗಳನ್ನು ವಶಪಡಿಸಿಕೊಂಡಿದೆ. ಪೀಟರ್ ವಿರುದ್ಧ 2023ರಲ್ಲಿ ಬೆಂಗಳೂರಿನ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆತ ಬೆಂಗಳೂರು ಸೇರಿ ವಿವಿಧ ನಗರಗಳು, ಕೇರಳಕ್ಕೆ ನಿಷೇಧಿತ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ. ಈ ದಂಧೆಯಲ್ಲಿ ಹಲವರು ಭಾಗಿಯಾದ ಸುಳಿವು ದೊರೆತಿದ್ದು, ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.
ಕಾನೂನು ಸುವ್ಯವಸ್ಥೆ ಡಿಸಿಪಿ ಸಿದ್ದಾರ್ಥ್ ಗೋಯಲ್, ಅಪರಾಧ ವಿಭಾಗದ ಡಿಸಿಪಿ ಬಿ.ಪಿ. ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಮನೋಜ್ ಕುಮಾರ್ ನಾಯಕ್ ನೇತೃತ್ವದಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಶಾಮ ಸುಂದರ್, ಪಿಎಸ್ಐ ಸುದೀಪ್, ಶರಣಪ್ಪ ಭಂಡಾರಿ, ನರೇಂದ್ರ, ಎಎಸ್ಐಗಳಾದ ಮೋಹನ್, ರಾಮ ಪೂಜಾರಿ ಸೀನಪ್ಪ, ಸುಜನ್ ಶೆಟ್ಟಿ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದು, ಡಿಜಿಪಿ ಅಲೋಕ್ ಮೋಹನ್ ಮತ್ತು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ತಲಾ ಒಂದು ಲಕ್ಷ ರೂ. ನಗದು ಬಹುಮಾನ ಘೋಷಿಸಿದ್ದಾರೆ.