ಬೆಂಗಳೂರು: ಗ್ರಾಹಕರ ದಾಖಲೆ ದುರ್ಬಳಕೆ ಮಾಡಿಕೊಂಡು ಸಿಮ್ ಕಾರ್ಡ್ ಆಕ್ಟಿವೇಟ್ ಮಾಡಿ ದುಬಾರಿ ಹಣಕ್ಕೆ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕಗ್ಗದಾಸನಪುರದ ಅಬ್ಬಾರೆಡ್ಡಿ ಲೇಔಟ್ ನಿವಾಸಿ 23 ವರ್ಷದ ಮಲ್ಲಿಕಾರ್ಜುನ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 85 ಆಕ್ಟಿವೇಟೆಡ್ ಸಿಮ್, 24 ಸಿಮ್ ಕಾರ್ಡ್, ಕೃತ್ಯಕ್ಕೆ ಬಳಸಿದ್ದ ಎರಡು ಮೊಬೈಲ್ ಫೋನ್ ಮತ್ತು ಇತರೆ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಬೆಂಗಳೂರಿನ ಬಸವೇಶ್ವರನಗರದ ಶೆಲ್ ಪೆಟ್ರೋಲ್ ಬಂಕ್ ಸಮೀಪ ಫುಟ್ ಪಾತ್ ನಲ್ಲಿ ಅಪರಿಚಿತ ವ್ಯಕ್ತಿ ಒಬ್ಬ ಜಿಯೋ ಸಿಮ್ ಮಾರಾಟ ಮಾಡುತ್ತಿದ್ದು, ಸಿಮ್ ಕಾರ್ಡ್ ಪೋರ್ಟ್ ಮಾಡಿಸಲು ಬರುವ ಗ್ರಾಹಕರ ಆಧಾರ್ ಕಾರ್ಡ್ ಸಂಖ್ಯೆ ಹಾಗೂ ಫೋಟೋ ಬಳಸಿಕೊಂಡು ಅನಧಿಕೃತವಾಗಿ ಸಿಮ್ ಗಳನ್ನು ಆಕ್ಟಿವೇಟ್ ಮಾಡುತ್ತಿದ್ದ. ಈ ಸಿಮ್ ಕಾರ್ಡ್ ಗಳನ್ನು ಅಪರಾಧ ಕೃತ್ಯಗಳಿಗೆ ಬಳಕೆ ಮಾಡುವ ವ್ಯಕ್ತಿಗಳಿಗೆ ದುಬಾರಿ ಹಣಕ್ಕೆ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಸಿಸಿಬಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.