ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರಿನಲ್ಲಿ ವಂಚಿಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಯುವರಾಜ್ ಬಂಧಿತ ಆರೋಪಿ ಎಂದು ಹೇಳಲಾಗಿದೆ. ತನಗೆ ಗಣ್ಯರ ಪರಿಚಯವಿದೆ ಎಂದು ಹೇಳಿಕೊಳ್ಳುತ್ತಿದ್ದ ಯುವರಾಜ್ ರಾಜ್ಯಸಭೆ ಸದಸ್ಯತ್ವ ಸೇರಿದಂತೆ ಪ್ರಮುಖ ಹುದ್ದೆಗಳನ್ನು ಕೊಡಿಸುವುದಾಗಿ ವಂಚಿಸುತ್ತಿದ್ದ ನಾಗರಬಾವಿಯಲ್ಲಿರುವ ಯುವರಾಜ್ ನಿವಾಸದ ಮೇಲೆ ದಾಳಿ ಮಾಡಿದ ಸಿಸಿಬಿ ಅಧಿಕಾರಿಗಳು 26 ಲಕ್ಷ ರೂಪಾಯಿ ನಗದು ಮತ್ತು 91 ಕೋಟಿ ರೂಪಾಯಿ ಮೊತ್ತದ ಚೆಕ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಉದ್ಯಮಿ ಸುಧೀಂದ್ರ ರೆಡ್ಡಿ ಅವರಿಗೆ ರಾಜ್ಯಸಭೆಯ ಸದಸ್ಯತ್ವ ಕೊಡಿಸುವುದಾಗಿ 10 ಕೋಟಿ ರೂಪಾಯಿಗೆ ವ್ಯವಹಾರ ಕುದುರಿಸಿದ್ದ ಆರೋಪಿ 1 ಕೋಟಿ ರೂಪಾಯಿ ಮುಂಗಡ ಪಡೆದುಕೊಂಡಿದ್ದ. ತನಗೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರು ಪರಿಚಯವಿದ್ದಾರೆ ಎಂದು ಆರೋಪಿ ಹೇಳಿದ್ದು, ಆತನ ಮಾತು ನಂಬಿದ ಉದ್ಯಮಿ ಹಣ ಕೊಟ್ಟಿದ್ದರು. ವಂಚನೆಗೊಳಗಾದ ಬಳಿಕ ಪೊಲೀಸರಿಗೆ ದೂರು ನೀಡಿದ್ದರು.