ಬೆಂಗಳೂರು: ನೇರ ನೇಮಕಾತಿ ಮೂಲಕ ಕೋರ್ಟ್ ಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಲವರಿಂದ 40 ಲಕ್ಷ ರೂಪಾಯಿಗೂ ಹೆಚ್ಚು ಹಣ ಪಡೆದು ವಂಚಿಸಿದ ಆರೋಪದ ಬಗ್ಗೆ ಸಿಸಿಬಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ,
ಆರ್.ಟಿ. ನಗರ ನಿವಾಸಿ ಅಬ್ದುಲ್ ರಜಾಕ್ ಎಂಬುವರು ದೂರು ನೀಡಿದ್ದು, ಕೊಪ್ಪಳ ಮೂಲದ ಸಿದ್ದಲಿಂಗಯ್ಯ ಹಿರೇಮಠ ಸೇರಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಾಗರಬಾವಿಯ ಪಾಪರೆಡ್ಡಿ ಪಾಳ್ಯದಲ್ಲಿ ಅಬ್ದುಲ್ ರಜಾಕ್ ಲೇಡೀಸ್ ಪಿಜಿ ನಡೆಸುತ್ತಿದ್ದು, ಎನ್‌ಜಿಒ ಕೂಡ ನಡೆಸುತ್ತಿದ್ದಾರೆ. 2023ರಲ್ಲಿ ಆರೋಪಿ ಸಿದ್ದಲಿಂಗಯ್ಯ ಪರಿಚಯವಾಗಿದ್ದ. ಸಹಕಾರ ನಗರದ ಆತನ ಕಚೇರಿಗೆ ತೆರಳಿದ್ದ ವೇಳೆ ತನಗೆ ಜಡ್ಜ್ ಗಳ ಪರಿಚಯವಿದ್ದು, ನೇರ ನೇಮಕಾತಿ ಮೂಲಕ ಗುಮಾಸ್ತ ಹುದ್ದೆ, ಪ್ರೊಸೆಸರ್ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದ.
ಅಬ್ದುಲ್ ರಜಾಕ್ ತನ್ನ ಚಿಕ್ಕಪ್ಪನ ಮಗ ಜಾವಿದ್ ಅವರಿಗೆ ಕೆಲಸ ಕೊಡಿಸುವಂತೆ ಆರೋಪಿಯೊಂದಿಗೆ ಮಾತನಾಡಿದ್ದು, ಸರ್ವರ್ ಹುದ್ದೆ ಕೊಡಿಸುವುದಾಗಿ 7 ಲಕ್ಷ ಪಡೆದುಕೊಂಡಿದ್ದ. 2023ರ ಮಾರ್ಚ್ ನಲ್ಲಿ ಸಿಟಿ ಸಿವಿಲ್ ಕೋರ್ಟ್ ಗೆ ಜಾವಿದ್ ಕರೆಸಿಕೊಂಡು ಸಹಿ ಪಡೆದು ಕೆಲಸವಾಗಿದೆ ಎಂದು ಹೇಳಿದ್ದ. ನಂತರ ನ್ಯಾಯಮೂರ್ತಿಗಳ ಹೆಸರಿನ ನಕಲಿ ಸಹಿ ಇರುವ ನೇಮಕಾತಿ ಪತ್ರ ಕೊಟ್ಟಿದ್ದ. ಇದೇ ರೀತಿ ಆರು ಮಂದಿಯಿಂದ ತಲಾ 7 ಲಕ್ಷ ರೂ.ನಂತೆ 40 ಲಕ್ಷಕ್ಕೂ ಅಧಿಕ ಹಣ ಪಡೆದು ವಂಚಿಸಿದ್ದಾನೆ ಎಂದು ಹೇಳಲಾಗಿದೆ. ಪ್ರಕರಣ ದಾಖಲಿಸಿಕೊಂಡ ಸಿಸಿಬಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ.