ಬೆಂಗಳೂರು: ಬೆಂಗಳೂರಿನಲ್ಲಿ ರೇವ್ ಪಾರ್ಟಿ ಮೇಲೆ ಸಿಸಿಬಿ ತಂಡ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿದ್ದಾರೆ. ಪಾರ್ಟಿ ಆಯೋಜಕ ವಾಸು ಸೇರಿದಂತೆ ಸಿಸಿಬಿ ಪೊಲೀಸರು ಐವರನ್ನು ಬಂಧಿಸಿ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಎಲೆಕ್ಟ್ರಾನಿಕ್ ಸಿಟಿ ಸಮೀಪದ ಜಿ.ಆರ್. ಫಾರ್ಮ್ ಹೌಸ್ ಮೇಲೆ ದಾಳಿ ಮಾಡಲಾಗಿದ್ದು, ಎಂಡಿಎಂಎ ಮಾತ್ರೆಗಳು ಮತ್ತು ಕೊಕೇನ್ ಪತ್ತೆಯಾಗಿದೆ.ಪಾರ್ಟಿಯಲ್ಲಿ 25ಕ್ಕೂ ಹೆಚ್ಚು ಯುವತಿಯರು ಇದ್ದರು. ಆಂಧ್ರಪ್ರದೇಶ, ಬೆಂಗಳೂರು ಮೂಲದ 100ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ಪಾರ್ಟಿಗೆ ಬಂದಿದ್ದವರೊಬ್ಬರ ಕಾರಿನಲ್ಲಿ ಆಂಧ್ರದ ಶಾಸಕರೊಬ್ಬರ ಪಾಸ್ ಪತ್ತೆಯಾಗಿದೆ. ಪಾರ್ಟಿಯಲ್ಲಿದ್ದವರ ಮರ್ಸಿಡಿಸ್-ಬೆನ್ಜ್, ಜಾಗ್ವಾರ್, ಆಡಿ ಕಾರ್ ಸೇರಿದಂತೆ 15ಕ್ಕೂ ಹೆಚ್ಚು ಐಷಾರಾಮಿ ಕಾರುಗಳನ್ನು ಜಪ್ತಿ ಮಾಡಲಾಗಿದೆ.ಪಾರ್ಟಿಯಲ್ಲಿ ಭಾಗಿಯಾಗಿದ್ದವರ ಪೈಕಿ ತೆಲುಗು ಚಿತ್ರರಂಗದ ಪೋಷಕ ನಟಿಯೊಬ್ಬರ ಸಹಿತ, ಕಿರುತೆರೆ ನಟ-ನಟಿಯರು, ಮಾಡೆಲ್ಗಳು ಹಾಗೂ ಟೆಕ್ಕಿಗಳನ್ನ ವಶಕ್ಕೆ ಪಡೆಯಲಾಗಿದೆ.
ತಡರಾತ್ರಿ ಎರಡು ಗಂಟೆಯಾದರೂ ಪಾರ್ಟಿ ನಡೆಯುತ್ತಿತ್ತು. ಅವಧಿ ಮೀರಿ ಪಾರ್ಟಿ ನಡೆಸಿದ್ದು, ಡ್ರಗ್ಸ್ ಬಳಕೆ ಮಾಡಲಾಗಿದೆ. ಹೈದರಾಬಾದ್ ಮೂಲದ ವಾಸು ಎಂಬುವವರು ಪಾರ್ಟಿ ಆಯೋಜಿಸಿದ್ದು, ಒಂದು ಬೆಂಜ್ ಕಾರ್ ನಲ್ಲಿ ಆಂಧ್ರ ಶಾಸಕನ ಪಾಸ್ ಪತ್ತೆಯಾಗಿದೆ. ಶಾಸಕ ಕಾಕನಿ ಗೋವರ್ಧನ ರೆಡ್ಡಿ ಹೆಸರಿನ ಪಾಸ್ ಪತ್ತೆಯಾಗಿದೆ. ಈ ಸಂಬಂಧ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.