ಸಿಬಿಎಸ್ಇಯ 12ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷಾ ಫಲಿತಾಂಶಕ್ಕೆ ಕಾದು ಕುಳಿತಿದ್ದಾರೆ. ಈ ಸಂದರ್ಭದಲ್ಲಿ ಫಲಿತಾಂಶಕ್ಕೆ ಸಂಬಂಧಿಸಿದಂತೆ ಹಲವು ನಕಲಿ ನೋಟೀಸ್ ಬಿಡುಗಡೆಯಾಗುತ್ತಿವೆ. ಕಳೆದ ವಾರವೇ ಈ ಬಗ್ಗೆ ಎಚ್ಚರಿಕೆ ನೀಡಿದ್ದ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ಇಂದು (ಜನವರಿ 25, 2022) ಮತ್ತೊಂದು ಎಚ್ಚರಿಕೆ ನೀಡಿದೆ.
12 ನೇ ತರಗತಿಯ ಅವಧಿ 1ರ ಪರೀಕ್ಷೆಯ ಫಲಿತಾಂಶ ಜನವರಿ 25ಕ್ಕೆ ಹೊರಬೀಳಲಿದೆ ಎಂಬ ನಕಲಿ ನೋಟೀಸ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿರುವ ಮಂಡಳಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದೆ.
ಟ್ವಿಟರ್ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಮಂಡಳಿಯು, ನಕಲಿ ನೋಟೀಸ್ ಹಂಚಿಕೊಂಡು ಫೇಕ್ ಎಂದು ಮಾಹಿತಿ ನೀಡಿದೆ. ನಕಲಿ ನೋಟೀಸ್ ನಲ್ಲಿ ಫಲಿತಾಂಶ ಜನವರಿ 25ನೇ ತಾರೀಖಿಗೆ ಹೊರಬೀಳಲಿದ್ದು, 2022 ರ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಪಡೆಯುವ ಪ್ರಕ್ರಿಯೆಯನ್ನು CBSE ಬದಲಾಯಿಸಿದೆ. ಎಲ್ಲಾ ಅಭ್ಯರ್ಥಿಗಳಿಗೆ ಅವರ ಕೇಂದ್ರದ ಮೂಲಕ ವಿಭಿನ್ನ ಬಳಕೆದಾರ ಹೆಸರು ಮತ್ತು ಪಾಸ್ವರ್ಡ್ ನೀಡಲಾಗುವುದು. ಫಲಿತಾಂಶವನ್ನು ಪಡೆಯಲು ಹೊಸ ವೆಬ್ ಪೋರ್ಟಲ್ಗೆ ಲಾಗ್ ಇನ್ ಮಾಡಲು ಈ ರುಜುವಾತುಗಳ ಅಗತ್ಯವಿದೆ ಎಂದು ನಕಲಿ ನೋಟೀಸ್ ನಲ್ಲಿ ಹೇಳಲಾಗಿದೆ. ಇದನ್ನ ಸಂಪೂರ್ಣ ಫೇಕ್ ಎಂದು ಸಿಬಿಎಸ್ಇ ಮಂಡಳಿಯ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಭಾರತದಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ CBSE ತರಗತಿ 10 ಮತ್ತು 12 ಟರ್ಮ್ 1 ಪರೀಕ್ಷೆಯ ಫಲಿತಾಂಶ 2022 ಗಾಗಿ ಕಾಯುತ್ತಿದ್ದಾರೆ. ಹಲವಾರು ಮಾಧ್ಯಮ ವರದಿಗಳ ಪ್ರಕಾರ, CBSE ಈ ವಾರ 10 ನೇ ತರಗತಿ ಮತ್ತು 12 ನೇ ತರಗತಿಯ ಬೋರ್ಡ್ ಪರೀಕ್ಷೆಯ ಅವಧಿ 1 ಫಲಿತಾಂಶಗಳನ್ನು ಘೋಷಿಸುವ ಸಾಧ್ಯತೆಯಿದೆ. ಆದರೆ, ಈ ಕುರಿತು ಇನ್ನು ಯಾವುದೇ ಅಧಿಕೃತ ಪ್ರಕಟಣೆ ಜಾರಿಯಾಗಿಲ್ಲ.