ನವದೆಹಲಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಸಿಬಿಎಸ್‌ಇ ಪಠ್ಯಕ್ರಮಕ್ಕೆ ಕೃತಕ ಬುದ್ಧಿಮತ್ತೆ ಸೇರಿದಂತೆ 33 ಹೊಸ ವಿಷಯಗಳನ್ನು ಸೇರಿಸಲು ಸಿದ್ಧತೆ ಕೈಗೊಳ್ಳಲಾಗಿದೆ.
ಆಧುನಿಕ ಜಗತ್ತಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಉದ್ದೇಶದಿಂದ ಎನ್‌ಇಪಿ ಅಡಿಯಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಕೌಶಲ್ಯ ಅಭಿವೃದ್ಧಿ ತರಬೇತಿ ಆಧರಿತ ಶಿಕ್ಷಣವನ್ನು ಪ್ರಮುಖವಾಗಿ ಆರರಿಂದ ಎಂಟನೇ ತರಗತಿಯ ಮಕ್ಕಳಿಗೆ ನೀಡಲು ಮುಂದಾಗಿದೆ. ಹೀಗಾಗಿ ಕೃತಕ ಬುದ್ಧಿಮತ್ತೆ ಸೇರಿದಂತೆ 33 ಹೊಸ ವಿಷಯಗಳನ್ನು ಸೇರ್ಪಡೆ ಮಾಡಲು ಸಿದ್ಧತೆ ನಡೆಸಲಾಗಿದೆ.
ಇಂತಹ ಶಿಕ್ಷಣದ ಆದ್ಯತೆಯನ್ನು 9ನೇ ತರಗತಿ ನಂತರ ಮಾತ್ರ ಮುಖ್ಯವೆಂದು ಪರಿಗಣಿಸಲಾಗಿತ್ತು. ಈಗ ಕೃತಕ ಬುದ್ಧಿಮತ್ತೆ, ಸಾಫ್ಟ್ವೇರ್, ಕಾಶ್ಮೀರಿ ಕಸೂತಿ, ಉಪಗ್ರಹ ಸಾಧನಗಳ ಅಧ್ಯಯನ, ಆರ್ಥಿಕ ಸಾಕ್ಷರತೆ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯಕ್ರಮ ಸಿದ್ಧಪಡಿಸಲಾಗಿದೆ. ಈ 33 ಹೊಸ ವಿಷಯಗಳನ್ನು ಸೇರ್ಪಡೆ ಮಾಡಿ ಪರಿಣಾಮಕಾರಿಯಾಗಿ ಜಾರಿಗೊಳಿಸಲು ಒತ್ತು ನೀಡಲಾಗುವುದು ಎಂದು ಹೇಳಲಾಗಿದೆ.
ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್(CBSE) ಈ ಮೂಲಕ ಪ್ರಸ್ತುತ ಪಠ್ಯಕ್ರಮಕ್ಕೆ ಬದಲಾವಣೆಯನ್ನು ತರುತ್ತದೆ. ಕೋಡಿಂಗ್, ಡೇಟಾ ಸೈನ್ಸ್, ಆಗ್ಮೆಂಟೆಡ್ ರಿಯಾಲಿಟಿ(AR), ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(AI), ಹಣಕಾಸು ಸಾಕ್ಷರತೆ, ಕಾಶ್ಮೀರಿ ಕಸೂತಿ, ಅಧ್ಯಯನಗಳ ಅಪ್ಲಿಕೇಶನ್, ಸಮೂಹ ಮಾಧ್ಯಮ – ಬೀಯಿಂಗ್ ಮೀಡಿಯಾ ಸಾಕ್ಷರತೆಯನ್ನು ಒಳಗೊಂಡಿರುವ 33 ವಿಷಯಗಳನ್ನು CBSE ಪಟ್ಟಿ ಮಾಡಿದೆ.
ರಾಷ್ಟ್ರೀಯ ಶಿಕ್ಷಣ ನೀತಿ-2020 ಶಾಲೆಗಳಲ್ಲಿ ಕೌಶಲ್ಯ ಶಿಕ್ಷಣವನ್ನು ಉತ್ತೇಜಿಸಲು ಹೆಚ್ಚಿನ ಒತ್ತು ನೀಡಿದೆ. ಈ ನೀತಿಯು ವೃತ್ತಿಪರ ಶಿಕ್ಷಣದೊಂದಿಗೆ ಸಂಬಂಧಿಸಿದ ಸಾಮಾಜಿಕ ಸ್ಥಾನಮಾನದ ಶ್ರೇಣಿಯನ್ನು ನಿವಾರಿಸುವ ಗುರಿಯನ್ನು ಹೊಂದಿದೆ ಮತ್ತು ಹಂತ ಹಂತವಾಗಿ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಮುಖ್ಯವಾಹಿನಿಯ ಶಿಕ್ಷಣಕ್ಕೆ ವೃತ್ತಿಪರ ಶಿಕ್ಷಣ ಕಾರ್ಯಕ್ರಮಗಳನ್ನು ಏಕೀಕರಿಸುವ ಅಗತ್ಯವಿದೆ ಎಂದು ಹೇಳಲಾಗಿದೆ.