ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(CBSE) 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ಬದಲಾವಣೆಗೆ ಅವಕಾಶ ನೀಡುವುದಾಗಿ ಹೇಳಿದೆ. ಮೊದಲ ಅವಧಿಯ ಪರೀಕ್ಷೆಗಾಗಿ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳನ್ನು ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ.
ಅನೇಕ ವಿದ್ಯಾರ್ಥಿಗಳು ತಾವು ಪ್ರವೇಶ ಪಡೆದುಕೊಂಡ ಶಾಲೆಗೆ ಇನ್ನೂ ಹಿಂತಿರುಗಿಲ್ಲ. ಬೇರೆ ಕಡೆ ವಾಸ ಮಾಡುತ್ತಿರುವ ಅಂತಹ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ತಮ್ಮ ಸಮೀಪದ ಪರೀಕ್ಷಾ ಕೇಂದ್ರಗಳಿಗೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು.
ನವೆಂಬರ್ 30 ರಿಂದ 10 ನೇ ತರಗತಿಯ ಮೊದಲ ಅವಧಿ ಪರೀಕ್ಷೆಗಳು ನಡೆಯಲಿವೆ. ಡಿಸೆಂಬರ್ 1 ರಿಂದ 12ನೇ ತರಗತಿ ಪರೀಕ್ಷೆಗಳು ಆರಂಭವಾಗಲಿದೆ. ಶಾಲೆ ಇರುವ ಊರಿಗೆ ಹೋಗಿ ಪರೀಕ್ಷೆ ಬರೆಯುವುದು ಅನೇಕ ವಿದ್ಯಾರ್ಥಿಗಳಿಗೆ ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರ ಬದಲಾವಣೆಗೆ ಅವಕಾಶ ನೀಡಲಾಗುವುದು.