ನವದೆಹಲಿ: ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವೆಂದೇ ಹೇಳಲಾಗುವ 10 ನೇ ತರಗತಿ ಪರೀಕ್ಷೆ ರದ್ದು ಮಾಡಲಾಗಿದೆ.
ಮೇ 4 ರಿಂದ ಜೂನ್ 14 ರವರೆಗೆ ನಡೆಯಬೇಕಿದ್ದ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಗಳನ್ನು ರದ್ದು ಮಾಡಲಾಗಿದೆ. ದೇಶಾದ್ಯಂತ ಕೊರೋನಾ ಸೋಂಕು ತೀವ್ರ ಹೆಚ್ಚಳವಾದ ಹಿನ್ನೆಲೆಯಲ್ಲಿ ಸಿಬಿಎಸ್ಇ 10ನೇ ತರಗತಿ ಪರೀಕ್ಷೆ ರದ್ದು ಮಾಡಲಾಗಿದ್ದು, 12ನೇ ತರಗತಿ ಪರೀಕ್ಷೆಯನ್ನು ಮುಂದೂಡಲು ತೀರ್ಮಾನ ಕೈಗೊಳ್ಳಲಾಗಿದೆ.
ಆದರೂ, ಸಿಬಿಎಸ್ಇ ಮಂಡಳಿ ಯಾವುದೇ ಅಭ್ಯರ್ಥಿಗೆ 10 ನೇ ತರಗತಿ ಪರೀಕ್ಷೆಯನ್ನು ಬರೆಯಲು ಅವಕಾಶ ನೀಡಲಿದೆ. ಪರೀಕ್ಷೆ ರದ್ದು ಮಾಡಿರುವುದರಿಂದ ವಸ್ತುನಿಷ್ಟ ಮಾನದಂಡದ ಆಧಾರದ ಮೇಲೆ 10 ನೇ ತರಗತಿಯ ಫಲಿತಾಂಶವನ್ನು ತಯಾರಿಸಲಾಗುತ್ತದೆ. ಫಲಿತಾಂಶ ಪ್ರಕಟವಾದ ನಂತರ ಯಾವುದೇ ವಿದ್ಯಾರ್ಥಿನಿ ಅಥವಾ ವಿದ್ಯಾರ್ಥಿಗೆ ನಿಗದಿಪಡಿಸಿದ ಅಂಕಗಳಿಂದ ತೃಪ್ತರಾಗದೇ ಇದ್ದಲ್ಲಿ ಪರೀಕ್ಷೆ ಬರೆಯಬಹುದಾಗಿದೆ. ಯಾವುದೇ ಅಭ್ಯರ್ಥಿಗೆ ಪರೀಕ್ಷೆಯಲ್ಲಿ ಕುಳಿತುಕೊಳ್ಳಲು ಅವಕಾಶ ನೀಡಲಾಗುವುದು. ಪರಿಸ್ಥಿತಿ ಅನುಕೂಲಕರವಾದಾಗ ಪರೀಕ್ಷೆ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವರಾದ ರಮೇಶ್ ಪೋಖ್ರಿಯಾಲ್ ನಿಶಾಂಕ್ ಹೇಳಿದ್ದಾರೆ.