ಏಪ್ರಿಲ್ 1ಕ್ಕೂ ಮುನ್ನ ಮುಂದಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ಆರಂಭಿಸದಂತೆ ತನ್ನ ಅಡಿ ಬರುವ ಎಲ್ಲಾ ಶಾಲೆಗಳಿಗೂ ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಆದೇಶ ಹೊರಡಿಸಿದೆ.
ಮುಂದಿನ ಶೈಕ್ಷಣಿಕ ವರ್ಷದ ಪಠ್ಯಕ್ರಮವನ್ನು ಮುಗಿಸುವ ಧಾವಂತದಲ್ಲಿ ಅನೇಕ ಶಾಲೆಗಳು ಮಾರ್ಚ್‌ನಲ್ಲೇ ತರಗತಿಗಳನ್ನು ಆರಂಭಿಸುತ್ತಿರುವುದು ಗಮನಕ್ಕೆ ಬಂದ ಬಳಿಕ ಸಿಬಿಎಸ್‌ಇ ಈ ಕ್ರಮಕ್ಕೆ ಮುಂದಾಗಿದೆ.
ಸದ್ಯ ಸಿಬಿಎಸ್‌ಇ 10ನೇ ತರಗತಿ ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಮಂಡಳಿ ಪರೀಕ್ಷೆಗಳನ್ನು ಆಯೋಜಿಸುತ್ತಿದೆ. ಈ ಪರೀಕ್ಷೆಗಳು ಕ್ರಮವಾಗಿ ಮಾರ್ಚ್ 21 ಹಾಗೂ ಏಪ್ರಿಲ್ 5ರಂದು ಕೊನೆಯಾಗಲಿವೆ.
ಮಕ್ಕಳಿಗೆ ಅತಿಯಾದ ಓದಿನ ಒತ್ತಡದಿಂದ ಸ್ವಲ್ಪ ಆಚೆ ಬಂದು, ಪಠ್ಯೇತರ ಚಟುವಟಿಕೆಗಳು, ಜೀವನ ಕೌಶಲ್ಯಗಳು, ದೈಹಿಕ ಶಿಕ್ಷಣ, ಸಾಮುದಾಯಿಕ ಸೇವೆಗಳಂಥ ಚಟುವಟಿಕೆಗಳಲ್ಲಿ ಭಾಗಿಯಾಗಲು ಅವಕಾಶ ನೀಡುವ ದೃಷ್ಟಿಯಿಂದ ಶೈಕ್ಷಣಿಕ ವರ್ಷವನ್ನು ಹೀಗೆ ತೀರಾ ಇಕ್ಕಟ್ಟಿನಲ್ಲಿ ಆರಂಭಿಸದೇ ಇರಲು ಶಾಲೆಗಳಿಗೆ ಸಿಬಿಎಸ್‌ಇ ಸೂಚಿಸಿದೆ.