ನವದೆಹಲಿ: ಸಿಬಿಎಸ್ಸಿ 12 ನೇ ತರಗತಿ ಪರೀಕ್ಷೆ ನಡೆಸಲು ಇದು ಸಮಯವಲ್ಲ. ಹಿಂದಿನ ಉಲ್ಲೇಖದ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪಾಸ್ ಮಾಡಿ ಎಂದು ದೆಹಲಿ ಸರ್ಕಾರ ಹೇಳಿದೆ.
ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಕೇಂದ್ರ ಸರ್ಕಾರದ ಉನ್ನತ ಮಟ್ಟದ ಸಭೆಯಲ್ಲಿ ಭಾಗವಹಿಸಿದ ಕೆಲವೇ ಸಮಯದ ನಂತರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
ದೆಹಲಿ ಸರ್ಕಾರ 12ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವ ಪರವಾಗಿಲ್ಲ. ಏಕೆಂದರೆ ಇದು ವಿದ್ಯಾರ್ಥಿಗಳ ಜೀವನವನ್ನು ಅಪಾಯಕ್ಕೆ ಸಿಲುಕಿಸುತ್ತದೆ. ಮುಂದಿನ ದಿನಗಳಲ್ಲಿ ಕರೋನಾ ಮೂರನೇ ತರಂಗದ ಸಾಧ್ಯತೆ ಇದೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಮತ್ತು ಹಿಂದಿನ ಪರೀಕ್ಷೆಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ಪಾಸು ಮಾಡುವಂತೆ ಒತ್ತಾಯಿಸುವುದಾಗಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ತಮ್ಮ ಫಲಿತಾಂಶದ ಬಗ್ಗೆ ತೃಪ್ತವಾಗದಿದ್ದರೆ ನಂತರದಲ್ಲಿ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರನ್ನು ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡಬೇಕು ಎಂದು ಪ್ರಸ್ತಾಪಿಸಿದ್ದಾರೆ. 12 ನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮೊದಲು ಲಸಿಕೆ ಹಾಕಬೇಕು. ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವ ಮೊದಲು 12 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವುದು ದೊಡ್ಡ ತಪ್ಪಾಗುತ್ತದೆ ಮತ್ತು ವೈಫಲ್ಯ ಎಂಬುದು ಸಾಬೀತಾಗುತ್ತದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
ದೇಶಾದ್ಯಂತ 12ನೇ ತರಗತಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಲಸಿಕೆ ಹಾಕುವ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಬೇಕು. ವಿದ್ಯಾರ್ಥಿಗಳಿಗೆ ಫಿಜರ್ ಲಸಿಕೆ ನೀಡುವ ಆಯ್ಕೆಯನ್ನು ಪರಿಗಣಿಸಬೇಕು ಎಂದು ಕೂಡ ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದ ಆದ್ಯತೆ ವ್ಯಾಕ್ಸಿನೇಷನ್ ಆಗಿರಬೇಕು. ಫಿಜರ್ ಕಂಪನಿ ಜೊತೆ ಮಾತನಾಡಬೇಕು. 1.4 ಕೋಟಿ ವಿದ್ಯಾರ್ಥಿಗಳು ಮತ್ತು ಅಷ್ಟೇ ಸಂಖ್ಯೆಯ ಶಿಕ್ಷಕರಿಗೆ ಲಸಿಕೆಯ ವ್ಯವಸ್ಥೆ ಮಾಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.