ನವದೆಹಲಿ: ದೇಶಾದ್ಯಂತ ಕೊರೋನಾ ವೈರಸ್ ಭಾರಿ ಪ್ರಮಾಣದಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಸಿಬಿಎಸ್ಇ 10 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದ್ದು, 12ನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.
10 ನೇ ತರಗತಿ ಪರೀಕ್ಷೆಯ ರದ್ದಾಗಿದ್ದರೂ, ಕೋವಿಡ್ ಪರಿಸ್ಥಿತಿ ಸುಧಾರಿಸಿದ ನಂತರ ಪರೀಕ್ಷೆ ನಡೆಸಲಾಗುವುದು. ಸಿಬಿಎಸ್ಸಿ ಮಂಡಳಿ ಫಲಿತಾಂಶ ಪ್ರಕಟಿಸಿದ ನಂತರ ತೃಪ್ತರಾಗದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು ಎಂದು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಈ ಮೊದಲೇ ಹೇಳಿದ್ದಾರೆ.
ಅಂದ ಹಾಗೆ, ಸಿಬಿಎಸ್ಇ 10 ನೇ ತರಗತಿ ವಿದ್ಯಾರ್ಥಿಗಳ ಮೌಲ್ಯಮಾಪನಕ್ಕಾಗಿ ಕೇಂದ್ರ ಶಿಕ್ಷಣ ಸಚಿವಾಲಯ ಸಿಬಿಎಸ್ಇ ಮಂಡಳಿ ವಸ್ತುನಿಷ್ಠ ಮಾನದಂಡವನ್ನು ಪರಿಗಣಿಸಲಿದೆ. ಸಿಬಿಎಸ್ಇ 10ನೇ ತರಗತಿ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಯೋಜನೆ ರೂಪಿಸಲು ಪ್ರಕ್ರಿಯೆ ಆರಂಭಿಸಲಾಗಿದೆ. ದೇಶಾದ್ಯಂತ ಅನೇಕ ಶಾಲೆಗಳು ಈಗಾಗಲೇ ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಅಭ್ಯಾಸದ ಮಾಹಿತಿಗಳನ್ನು ಸಿಬಿಎಸ್ಸಿ ಹಂಚಿಕೊಂಡಿವೆ.
ಬೆಂಗಳೂರು, ಮೈಸೂರು, ದೆಹಲಿ, ನೋಯ್ಡಾ, ಭುವನೇಶ್ವರ್, ಸೂರತ್ ನ ಅನೇಕ ಶಾಲೆಗಳು ವರ್ಷದಲ್ಲಿ ನಡೆಸಲಾದ ಆನ್ಲೈನ್ ಮತ್ತು ಆಫ್ಲೈನ್ ಪರೀಕ್ಷೆಗಳ ಸಂಖ್ಯೆ ವಿದ್ಯಾರ್ಥಿಗಳು ಪಡೆದ ಅಂಕ ಮೊದಲಾದ ಮಾಹಿತಿಗಳನ್ನು ಸಿಬಿಎಸ್ಇ ಯೊಂದಿಗೆ ಹಂಚಿಕೊಂಡಿವೆ. ಪರೀಕ್ಷೆಯಲ್ಲಿ ಬಳಸಲಾದ ಮೌಲ್ಯಮಾಪನ ವಿಧಾನಗಳನ್ನು ಶಾಲೆಗಳು ಸಿಬಿಎಸ್ಇ ಜೊತೆಗೆ ಹಂಚಿಕೊಂಡಿದ್ದು, ಈ ಮಾಹಿತಿಯನ್ನು ವಸ್ತುನಿಷ್ಠ ಮಾನದಂಡಕ್ಕೆ ಯೋಜನೆ ರೂಪಿಸಲು ಮತ್ತು ಇದನ್ನು ಫಳಿತಾಂಶ ಪ್ರಕಟಿಸಲು ಪರಿಗಣಿಸಲು ಸಿಬಿಎಸ್ಇ ಮಂಡಳಿ ಕ್ರಮ ಕೈಗೊಂಡಿದೆ.
ವಿಶೇಷ ವಸ್ತುನಿಷ್ಠ ಮಾನದಂಡದ ಆಧಾರದ ಮೇಲೆ ಸಿಬಿಎಸ್ಇ 10ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿ ಮುಂದಿನ ತರಗತಿಗೆ ಬಡ್ತಿ ನೀಡಲಾಗುವುದು ಎಂದು ಈಗಾಗಲೇ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಘೋಷಿಸಿದ್ದಾರೆ. ಯಾವುದೇ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಗೆ ನಿಗದಿಪಡಿಸಿದ ಅಂಕಗಳಿಗಿಂತ ತೃಪ್ತರಾಗದಿದ್ದರೆ ಪರೀಕ್ಷೆ ಬರೆಯಬಹುದು. ಕೋವಿಡ್ ದೂರವಾಗಿ ಅನುಕೂಲಕರವಾದ ಪರಿಸ್ಥಿತಿ ನಿರ್ಮಾಣವಾದ ನಂತರ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಹೇಳಲಾಗಿದೆ.