ನವದೆಹಲಿ: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಸಿಬಿಎಸ್ಇ 10ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪ್ರತಿವರ್ಷ ಸುಮಾರು 21.5 ಲಕ್ಷ ವಿದ್ಯಾರ್ಥಿಗಳು ಸಿಬಿಎಸ್ಇ 10ನೇ ತರಗತಿ ಪರೀಕ್ಷೆಗೆ ಹಾಜರಾಗುತ್ತಾರೆ. ಈಗ ವಿದ್ಯಾರ್ಥಿಗಳಿಗೆ ಯಾವುದೇ ಬೋರ್ಡ್ ಪರೀಕ್ಷೆಗಳು ಇರುವುದಿಲ್ಲ. ಆದರೂ ಅವರಿಗೆ ವಿಶೇಷ ಮಾನದಂಡದ ಆಧಾರದ ಮೇಲೆ ಮುಂದಿನ ತರಗತಿಗೆ ಬಡ್ತಿ ನೀಡಲಾಗುತ್ತದೆ.
ಇದು ವಸ್ತುನಿಷ್ಠ ಮಾನದಂಡ ಎಂದು ಸಿಬಿಎಸ್ಸಿ ಮಂಡಳಿ ಹೇಳಿಕೊಂಡರೂ, ನಿಖರವಾದ ಮಾನದಂಡ ಯಾವುದು ಎಂಬ ವಿವರಗಳನ್ನು ಮಂಡಳಿ ಇನ್ನು ಬಹಿರಂಗಪಡಿಸಿಲ್ಲ. ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಅವರು ನೀಡಿರುವ ಮಾಹಿತಿಯಂತೆ, 10 ನೇ ತರಗತಿ ವಿದ್ಯಾರ್ಥಿಗಳು ಆಂತರಿಕ ಮೌಲ್ಯಮಾಪನದ ಆಧಾರದ ಮೇಲೆ ಉತ್ತೀರ್ಣರಾಗುತ್ತಾರೆ ಎಂದು ಹೇಳಲಾಗಿದೆ.
ಕಳೆದ ವರ್ಷ ಇದೇ ಮಾದರಿ ಅನುಸರಿಸಲಾಗಿತ್ತು. ಸಿಬಿಎಸ್ಇ ಬೋರ್ಡ್ ಪರೀಕ್ಷೆಗಳು 2020 ರಲ್ಲಿ ಕೋರೋನಾ ಸಾಂಕ್ರಮಿಕ ರೋಗದ ಕಾರಣದಿಂದ ಸರಿಯಾಗಿ ನಡೆದಿರಲಿಲ್ಲ. ಮೂರು ಅಥವಾ ಹೆಚ್ಚಿನ ಪತ್ರಿಕೆಗಳಿಗೆ ಹಾಜರಾದ ವಿದ್ಯಾರ್ಥಿಗಳಿಗೆ ಅವರು ಹಾಜರಾದ ಯಾವುದೇ ಮೂರು ವಿಷಯದಲ್ಲಿ ಪಡೆದ ಅತಿ ಹೆಚ್ಚು ಅಂಕಗಳ ಆಧಾರದ ಮೇಲೆ ಅಂಕಗಳನ್ನು ನೀಡಲಾಗಿದೆ. ಕೇವಲ ಎರಡು ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಗೆ ಅತಿಹೆಚ್ಚು ಅಂಕಗಳಿಸಿದ ಎರಡು ಪರೀಕ್ಷೆಗಳ ಸರಾಸರಿಯನ್ನು ಪರಿಗಣಿಸಲಾಗಿದ್ದು ಅವುಗಳ ಆಧಾರದ ಮೇಲೆ ಅಂಕ ನೀಡಲಾಗಿದೆ.
ಆಂತರಿಕ ಅಥವಾ ಪ್ರಾಯೋಗಿಕ ಅಥವಾ ಯೋಜನೆ ಆಧಾರಿತ ಮೌಲ್ಯಮಾಪನದಲ್ಲಿನ ಸಾಧನೆಯ ಆಧಾರದ ಮೇಲೆ ವಿದ್ಯಾರ್ಥಿಗಳ ಫಲಿತಾಂಶವನ್ನು ಲೆಕ್ಕ ಹಾಕಲಾಗಿದೆ. ವಿಶೇಷವಾಗಿ ಎರಡು ಪತ್ರಿಕೆಗಳಿಗಿಂತ ಕಡಿಮೆ ಪರೀಕ್ಷೆಗೆ ಹಾಜರಾದವರಿಗೆ ಪ್ರಾಯೋಗಿಕ ಪರೀಕ್ಷೆಗಳನ್ನು ಮಂಡಳಿಯು ಈಗಾಗಲೇ ಪರಿಗಣಿಸಿದೆ. ಇದೇ ಮಾದರಿ ಫಲಿತಾಂಶಕ್ಕೆ ಅನುಸರಿಸಲಾಗುತ್ತದೆ.
ಈ ಆಧಾರದ ಮೇಲೆ ವಿದ್ಯಾರ್ಥಿ ಅಥವಾ ವಿದ್ಯಾರ್ಥಿನಿಗೆ ನಿಗದಿಪಡಿಸಿದ ಅಂಕಗಳಿಂದ ತೃಪ್ತರಾಗದ ಯಾವುದೇ ಅಭ್ಯರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. ಪರಿಸ್ಥಿತಿ ಅನುಕೂಲಕರವಾದ ಸಂದರ್ಭದಲ್ಲಿ ಪರೀಕ್ಷೆ ನಡೆಸಲಿದ್ದು, ಮಂಡಳಿ ನೀಡಿದ ಅಂಕಕ್ಕೆ ತೃಪ್ತರಾಗದ ಯಾವುದೇ ವಿದ್ಯಾರ್ಥಿ ಪರೀಕ್ಷೆ ಬರೆಯಬಹುದು ಎಂದು ಹೇಳಲಾಗಿದೆ.