ನವದೆಹಲಿ: ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕು ಭಾರೀ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ತಿಂಗಳ ಕೊನೆಯಲ್ಲಿ ನಡೆಯಬೇಕಿದ್ದ 10 ಮತ್ತು 12 ನೇ ತರಗತಿಗಳ ರಾಜ್ಯ ಮಂಡಳಿ ಪರೀಕ್ಷೆಯನ್ನು ಮಹಾರಾಷ್ಟ್ರ ಸರ್ಕಾರ ಮುಂದೂಡಿದೆ.
ಏಪ್ರಿಲ್ 23 ರಿಂದ 12ನೇ ತರಗತಿ ಮತ್ತು ಏಪ್ರಿಲ್ 30 ರಿಂದ 10 ನೇ ತರಗತಿ ಪರೀಕ್ಷೆಗಳು ಪ್ರಾರಂಭವಾಗಬೇಕಿತ್ತು. ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳನ್ನು ಮುಂದೂಡಲಾಗಿದೆ. ಅದೇ ರೀತಿ ದೇಶದೆಲ್ಲೆಡೆ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಿಬಿಎಸ್ಇ ಬೋರ್ಡ್ 12 ನೇ ಮತ್ತು 10 ನೇ ತರಗತಿ ಪರೀಕ್ಷೆಗಳನ್ನು ಮುಂದೂಡುವ ಕುರಿತು ಪರಿಶೀಲನೆ ನಡೆಸಿದೆ.
ವಿದ್ಯಾರ್ಥಿಗಳು, ಪೋಷಕರು, ರಾಜಕಾರಣಿಗಳು, ಸೆಲೆಬ್ರಿಟಿಗಳು ಸೇರಿದಂತೆ ಹಲವರು ಪರೀಕ್ಷೆ ನಡೆಸುವ ನಿರ್ಧಾರವನ್ನು ಮರುಪರಿಶೀಲಿಸುವಂತೆ ಸಿಬಿಎಸ್ಇ ಬೋರ್ಡ್ ಗೆ ಒತ್ತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಫ್ಲೈನ್ ನಲ್ಲಿ ಪರೀಕ್ಷೆ ನಡೆಸುವ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಸಿಬಿಎಸ್ಇ ಚಿಂತನೆ ನಡೆಸಿದೆ.
ಕೋವಿಡ್ ಪ್ರಕರಣ ಏರಿಕೆಯಾಗುತ್ತಿರುವುದದಿಂದ 10 ನೇ ತರಗತಿ ಮತ್ತು 12 ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡುವ ಬಗ್ಗೆ ಶಿಕ್ಷಣ ಸಚಿವಾಲಯ ಮತ್ತು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವುದು ಕಷ್ಟವೆಂದು ಹೇಳಲಾಗಿದ್ದು, ಪರೀಕ್ಷೆ ದಿನಾಂಕವನ್ನು ಮರುಪರಿಶೀಲಿಸಲು ಶಿಕ್ಷಣ ಸಚಿವಾಲಯ, ಸರ್ಕಾರ ಮುಕ್ತವಾಗಿದೆ. ಪರೀಕ್ಷಾ ವೇಳಾಪಟ್ಟಿಯಲ್ಲಿ ಬದಲಾವಣೆ ಸೂಚಿಸಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.