ಕೊರೊನಾ ವೈರಸ್ ಗೆ ತಂದೆ-ತಾಯಿಯನ್ನು ಕಳೆದುಕೊಂಡಿದ್ದ ವನಿಶಾ ಪಾಠಕ್ ಸಾಧಿಸಿ ತೋರಿಸಿದ್ದಾಳೆ. ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇಕಡಾ 99.8 ಅಂಕ ಪಡೆದಿರುವ ವನಿಶಾ ಎಲ್ಲರ ಕಣ್ಣಲ್ಲಿ ನೀರು ತರಿಸಿದ್ದಾಳೆ. ವನಿಶಾ, ಭೋಪಾಲ್ ನ ಟಾಪರ್ ವಿದ್ಯಾರ್ಥಿಗಳಲ್ಲಿ ಒಬ್ಬಳಾಗಿದ್ದಾಳೆ.
ಕೊರೊನಾದಲ್ಲಿ ತಂದೆ-ತಾಯಿ ಕಳೆದುಕೊಂಡಿದ್ದ ವನಿಶಾ, ಕವಿತೆಯೊಂದನ್ನು ಬರೆದಿದ್ದಳು. ನಾನು ನೀನಿಲ್ಲದೆ ಗಟ್ಟಿ ಹುಡುಗಿಯಾಗ್ತೇನೆಂದು ಕವಿತೆಯಲ್ಲಿ ಹೇಳಿದ್ದಳು. ಅದ್ರಂತೆ ಈಗ ವನಿಶಾ, ಸಾಧಿಸಿ ತೋರಿಸಿದ್ದಾಳೆ. ಎಲ್ಲರೂ 10ನೇ ತರಗತಿ ಪರೀಕ್ಷೆ ತಯಾರಿ ನಡೆಸುತ್ತಿದ್ದರೆ ವನಿಶಾ, ತಂದೆ-ತಾಯಿ ಕಳೆದುಕೊಂಡ ದುಃಖದಲ್ಲಿದ್ದಳು. ತಂದೆ-ತಾಯಿ ಕಳೆದುಕೊಂಡು ಕತ್ತಲೆಯಲ್ಲಿದ್ದೆ. ನನ್ನ ಜೀವನದಲ್ಲಿ ಎಲ್ಲವೂ ಮುಗಿಯಿತು ಎಂದುಕೊಂಡಿದ್ದೆ. ಆದ್ರೆ ನನ್ನ ತಮ್ಮನನ್ನು ನೋಡಿ ನಾನು ಎಚ್ಚೆತ್ತುಕೊಂಡೆ. 16ನೇ ವಯಸ್ಸಿನಲ್ಲಿ ಆತನ ಜವಾಬ್ದಾರಿ ನನ್ನ ಹೆಗಲಿಗೆ ಬಂದಿತ್ತು. ಆತನನ್ನು ನೋಡಿಕೊಳ್ಳುವ ಜೊತೆಗೆ ಅಧ್ಯಯನದ ಬಗ್ಗೆ ಗಮನ ನೀಡಬೇಕಿತ್ತು ಎಂದು ವನಿಶಾ ಹೇಳಿದ್ದಾಳೆ.
ಐಐಟಿ ಅಥವಾ ಯುಪಿಎಸ್ಸಿ ಮಾಡಿ ದೇಶ ಸೇವೆ ಮಾಡಬೇಕೆಂಬುದು ನನ್ನ ತಂದೆ ಆಸೆಯಾಗಿತ್ತು. ಅದನ್ನು ನಾನು ಈಡೇರಿಸುತ್ತೇನೆಂದು ವನಿಶಾ ಹೇಳಿದ್ದಾಳೆ. ಇಂಗ್ಲಿಷ್, ಸಂಸ್ಕೃತ, ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನದಲ್ಲಿ ವನಿಶಾ, 100ಕ್ಕೆ 100 ಅಂಕ ಪಡೆದಿದ್ದಾಳೆ. ಗಣಿತದಲ್ಲಿ 97 ಅಂಕ ಪಡೆದಿದ್ದಾಳೆ. ವನಿಶಾ ತಂದೆ ಜಿತೇಂದ್ರ ಕುಮಾರ್ ಕಂಪನಿಯೊಂದರಲ್ಲಿ ಹಣಕಾಸು ಸಲಹೆಗಾರರಾಗಿದ್ದರು. ತಾಯಿ ಡಾ.ಸೀಮಾ ಪಾಠಕ್ ವೃತ್ತಿಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದರು.
ವನಿಶಾ, ಕೊನೆ ಬಾರಿ ತಾಯಿ ಮುಖವನ್ನು ನೋಡಿರಲಿಲ್ಲವಂತೆ. ಮೇ 4ರಂದು ತಾಯಿ ಹಾಗೂ ಮೇ 15ರಂದು ತಂದೆ ಸಾವನ್ನಪ್ಪಿದ್ದಾರೆ. ಕೊರೊನಾದಿಂದ ಸಾವನ್ನಪ್ಪಿದ್ದಾರೆಂದು ಸಂಬಂಧಿಕರು ಹೇಳಿದ್ದರಂತೆ. ಸದ್ಯ ವನಿಶಾ ಹಾಗೂ ಆಕೆ ಸಹೋದರ ಭೋಪಾಲ್‌ನ ಸರ್ಕಾರಿ ಎಂವಿಎಂ ಕಾಲೇಜಿನ ಪ್ರಾಧ್ಯಾಪಕರಾದ ಡಾ.ಅಶೋಕ್ ಕುಮಾರ್ ಮನೆಯಲ್ಲಿ ವಾಸವಾಗಿದ್ದಾರೆ.