ಬೆಂಗಳೂರು: ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದ ಸಾಕ್ಷಿಗಳ ಮೇಲೆ ಆರೋಪಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಇತರರು ಪ್ರಭಾವ ಬೀರುತ್ತಿದ್ದಾರೆ ಎಂದು ಆರೋಪಿಸಿ ಸಿಬಿಐ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ.
ಸಿಬಿಐ ಪರವಾಗಿ ವಕೀಲ ಗಂಗಾಧರಶೆಟ್ಟಿ ಸೋಮವಾರ ಅರ್ಜಿ ಸಲ್ಲಿಸಿದ್ದು, ವಿನಯ್ ಕುಲಕರ್ಣಿ ಹಾಗೂ ಚಂದ್ರಶೇಖರ್ ಜಾಮೀನು ರದ್ದುಪಡಿಸುವಂತೆ ಕೋರಿದ್ದಾರೆ. ಪ್ರಕರಣದ ಅಪ್ರೂವರ್ ಸಾಕ್ಷಿಯಾದ ಶಿವಾನಂದ ಬಿರಾದಾರ್ ಅವರ ಮೇಲೆ ಒತ್ತಡ ಹಾಗೂ ಪ್ರಭಾವ ಬೀರಲಾಗಿದೆ. ಇತರೆ ಸಾಕ್ಷಿಗಳಾದ ರಾಘವೇಂದ್ರ ಅವರಿಗೂ ತುಮಕೂರಿನ ಲಾಡ್ಜ್ ನಲ್ಲಿ ಕೊಠಡಿ ಬುಕ್ ಮಾಡಿಸಿಕೊಟ್ಟು ಮಾತುಕತೆ ನಡೆಸಲಾಗಿದೆ. ಜೊತೆಗೆ ದೂರವಾಣಿ ಕರೆಗಳ ಮೂಲಕ ಸಂಭಾಷಣೆ ನಡೆಸಿ ಪ್ರಭಾವ ಬೀರಲಾಗಿದೆ ಎಂದು ಹೇಳಲಾಗಿದೆ.
ಸಿಬಿಐ ಪರ ವಕೀಲರು ಸಲ್ಲಿಸಿದ ಅರ್ಜಿಯ ಸಂಬಂಧ ಅಕ್ಷೇಪಣೆ ಸಲ್ಲಿಸುವಂತೆ ಆರೋಪಿಗಳ ಪರ ವಕೀಲರಿಗೆ ಕೋರ್ಟ್ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ. 2016ರ ಸೆಪ್ಟೆಂಬರ್ 9 ರಂದು ಧಾರವಾಡದ ಹೆಬ್ಬಳ್ಳಿ ಜಿಲ್ಲಾ ಪಂಚಾಯಿತಿ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್ ಗೌಡರನ್ನು ಕೊಲೆ ಮಾಡಲಾಗಿತ್ತು.