ಕಾರವಾರ: ಹಿಂದೂ ಕಾರ್ಯಕರ್ತ ಪರೇಶ್ ಮೇಸ್ತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವರದಿ ಸಲ್ಲಿಸಿದೆ. ಸಾಯುವ ಮೊದಲು ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪರೇಶ್ ಮೇಸ್ತಾ ಭಾಗಿಯಾಗಿದ್ದ ಬಗ್ಗೆ ಸಿಬಿಐ ವರದಿ ಸಲ್ಲಿಸಿದೆ.
ನ್ಯಾಯಾಲಯಕ್ಕೆ ಸಿಬಿಐನಿಂದ ಅಂತಿಮ ವರದಿ ಸಲ್ಲಿಸಲಾಗಿದ್ದು, ಕುಮಟಾದಲ್ಲಿ ನಡೆದ ಸಿದ್ದರಾಮಯ್ಯನವರ ಕಾರ್ಯಕ್ರಮದಲ್ಲಿ ಪರೇಶ್ ಮೇಸ್ತಾ ಭಾಗಿಯಾಗಿದ್ದರು. 25 ಕಿಲೋ ಮೀಟರ್ ಪ್ರಯಾಣಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮ ಮುಗಿಸಿ ಸಂಜೆ ಮನೆಗೆ ಬಂದಿದ್ದ ಪರೇಶ್ ಮೇಸ್ತಾ ಮನೆಯಿಂದ ಸ್ನೇಹಿತರ ಭೇಟಿಗೆ ಹೋಗಿದ್ದರು ಎಂದು ಹೊನ್ನಾವರ ಕೋರ್ಟ್ ಗೆ ಸಿಬಿಐ ವರದಿ ಸಲ್ಲಿಸಿದೆ.
ಪರೇಶ್ ಮೇಸ್ತಾ ಒಡನಾಡಿಗಳು ಮತ್ತು ಆತನ ಸ್ನೇಹಿತರ ಹೇಳಿಕೆ ಪಡೆಯಲಾಗಿದೆ. ಪರೇಶ್ ಮೇಸ್ತಾ ಯಾವುದೇ ಹುಡುಗಿಯನ್ನು ಪ್ರೀತಿಸುತ್ತಿರಲಿಲ್ಲ. ಶಬರಿಮಲೆಗೆ ಹೋಗಲು ತಂದೆಯ ಒಪ್ಪಿಗೆ ಪಡೆದುಕೊಂಡಿದ್ದ ಎಂದು ಹೇಳಲಾಗಿದೆ.
ಆತನ ಕೊಲೆ ಮಾಡಿದ ಕುರಿತು ಪುರಾವೆ ಇಲ್ಲ ಎಂದು ಸಿಬಿಐ ವರದಿ ಸಲ್ಲಿಸಿದೆ. 2017ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕೋಮುಗಲಭೆ ನಡೆದ ನಂತರ ಪರಮೇಶ್ ಮೇಸ್ತಾ ಶವವಾಗಿ ಪತ್ತೆಯಾಗಿದ್ದ. ಆತ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟಿರಬಹುದು ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ.