ಬೆಂಗಳೂರು: ನಕಲಿ ದಾಖಲೆ ಸೃಷ್ಟಿಸಿ ಅವುಗಳ ಆಧಾರದ ಮೇಲೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ 12.48 ಕೋಟಿ ರೂ. ಸಾಲ ಪಡೆದು ವಂಚಿಸಿದ ಆರೋಪದ ಮೇಲೆ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಲಾಗಿದೆ.
ಬೆಂಗಳೂರಿನ ಎಂಜಿ ರಸ್ತೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಎಸ್.ಡಿ. ಮೋದಿ ದೂರು ನೀಡಿದ್ದು, ಇದನ್ನು ಆಧರಿಸಿ ಬೆಂಗಳೂರಿನ ನಂಜಪ್ಪ ಶಿವಪ್ರಸಾದ್, ಅವರ ಪತ್ನಿ ಉಮಾ ಪ್ರಸಾದ್, ರಾಯಲ್ ಕಂಕಾರ್ಡ್ ಎಜುಕೇಶನ್ ಟ್ರಸ್ಟ್ ಮತ್ತು ಟ್ರಸ್ಟ್ ಆಡಳಿತ ಮಂಡಳಿ ಪ್ರಮುಖರಾದ ಎಲ್.ಆರ್. ಶಿವರಾಮೇಗೌಡ, ಅವರ ಪತ್ನಿ ಸುಧಾ ಶಿವರಾಮೇಗೌಡ, ಮಗ ಚೇತನ್ ಗೌಡ, ಸೊಸೆ ಎಲ್.ಎಸ್, ಭವ್ಯಾ ಗೌಡ, ಬ್ಯಾಂಕ್ ನ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ.
ಒಳಸಂಚು ರೂಪಿಸಿ ನಕಲಿ ದಾಖಲೆ ಸೃಷ್ಟಿಸಿ ಅವುಗಳನ್ನು ಬಳಸಿಕೊಂಡು ಪಂಜಾಬ್ ನ್ಯಾಷನಲ್ ಬ್ಯಾಂಕ್ ನಿಂದ ಸಾಲ ಪಡೆದಿದ್ದ ಆರೋಪಿಗಳು ಸಾಲದ ಹಣವನ್ನು ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಸಾಲ ಮರುಪಾವತಿ ಮಾಡದೆ ವಂಚಿಸಿದ್ದಾರೆ ಎಂದು ದೂರು ನೀಡಲಾಗಿದೆ.
ನವೆಂಬರ್ 7ರಂದು ದೂರು ನೀಡಲಾಗಿದ್ದು, ನವೆಂಬರ್ 21ರಂದು ಎಲ್.ಆರ್. ಶಿವರಾಮೇಗೌಡ ಸೇರಿದಂತೆ ಎಲ್ಲಾ ಆರೋಪಿತರ ವಿರುದ್ಧ ಸಿಬಿಐನ ಭ್ರಷ್ಟಾಚಾರ ನಿಗ್ರಹದಳದ ಬೆಂಗಳೂರು ಘಟಕದಿಂದ ಕೇಸ್ ದಾಖಲಿಸಿಕೊಳ್ಳಲಾಗಿದೆ.