ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಸಿಲುಕಿಸದಿರಲು 25 ಕೋಟಿ ರೂಪಾಯಿ ಲಂಚ ಕೇಳಿದ ಆರೋಪದ ಮೇಲೆ ಎನ್.ಸಿ.ಬಿ. ಮಾಜಿ ಅಧಿಕಾರಿ ಸಮೀರ್ ವಾಂಖೆಡೆ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಸಿಬಿಐ ಪರಿಶೀಲನೆ ನಡೆಸಿದೆ.
ಸಮೀರ್ ವಾಂಖೆಡೆ ಸೇರಿದಂತೆ ಇತರ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಿದ ನಂತರ ಸಿಬಿಐ ಶುಕ್ರವಾರ ಶೋಧ ನಡೆಸಿತು. ಅಕ್ಟೋಬರ್ 2, 2021 ರಂದು ಕಾರ್ಡೆಲಿಯಾ ಕ್ರೂಸ್ ಹಡಗಿನಲ್ಲಿ ಡ್ರಗ್ ಬಸ್ಟ್ ಪ್ರಕರಣದಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಬಂಧಿಸಲಾಗಿತ್ತು. ಡ್ರಗ್ಸ್ ಆನ್ ಕ್ರೂಸ್ ಪ್ರಕರಣದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ ಎನ್ಸಿಬಿ ಆರ್ಯನ್ ಖಾನ್ಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ ಡ್ರಗ್ಸ್ ನಿಯಂತ್ರಣ ಏಜೆನ್ಸಿ ಸ್ಥಾಪಿಸಿದ ಎಸ್ಐಟಿ ಸಮೀರ್ ವಾಂಖೆಡೆ ನೇತೃತ್ವದ ತನಿಖೆಯಲ್ಲಿ ಲೋಪವಾಗಿದೆ ಎಂದು ಹೇಳಿದೆ.
ಮುಂಬೈ, ದೆಹಲಿ, ರಾಂಚಿ ಮತ್ತು ಕಾನ್ಪುರದ 29 ಸ್ಥಳಗಳಲ್ಲಿ ಶೋಧ ಕಾರ್ಯಗಳನ್ನು ನಡೆಸಲಾಗಿದೆ ಎಂದು ಸಿಬಿಐ ಹೇಳಿದೆ. ಐಆರ್ಎಸ್ ಅಧಿಕಾರಿ ವಾಂಖೆಡೆ ಮತ್ತು ಇತರರು ಮಾದಕ ದ್ರವ್ಯ ದಂಧೆಯಲ್ಲಿ ಆರ್ಯನ್ ಖಾನ್ ಅವರನ್ನು ಬಂಧಿಸದಿರಲು 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸಮೀರ್ ವಾಂಖೆಡೆ ಮತ್ತು ಅವರ ಸಹಚರರು ಮುಂಗಡವಾಗಿ 50 ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ಸಿಬಿಐಗೆ ಮಾಹಿತಿ ಸಿಕ್ಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರ್ಯನ್ ಖಾನ್ ಬಂಧನದ ವೇಳೆ ಮುಂಬೈನ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಮುಖ್ಯಸ್ಥರಾಗಿದ್ದ ವಾಂಖೆಡೆ ಅವರನ್ನು ಕಳೆದ ವರ್ಷ ಮೇ ತಿಂಗಳಲ್ಲಿ ಚೆನ್ನೈನಲ್ಲಿರುವ ತೆರಿಗೆದಾರರ ಸೇವೆಗಳ ಮಹಾನಿರ್ದೇಶನಾಲಯಕ್ಕೆ ವರ್ಗಾಯಿಸಲಾಗಿತ್ತು.