ನವದೆಹಲಿ: 10 ವರ್ಷದ ಅವಧಿಯಲ್ಲಿ ಸುಮಾರು 50 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪದಡಿ ಉತ್ತರ ಪ್ರದೇಶ ಸರ್ಕಾರಿ ಉದ್ಯೋಗಿಯನ್ನು ಬಂಧಿಸಲಾಗಿದೆ.
ಸರ್ಕಾರದ ಕಿರಿಯ ಇಂಜಿನಿಯರ್ ಚಿತ್ರಕೂಟ ಜಿಲ್ಲೆಯ ನಿವಾಸಿ ರಾಂಭವನ್ ಬಂಧಿತ ಆರೋಪಿ ಎಂದು ಹೇಳಲಾಗಿದೆ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಲೈಂಗಿಕ ಸಾಮಗ್ರಿಗಳ ಹಂಚಿಕೆ, ಮಾರಾಟ, ಫೋಟೋ, ವಿಡಿಯೋ ಶಿಶು ಕಾಮಿಗಳಿಗೆ ಸಾಮಗ್ರಿ ಒದಗಿಸಿದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ. ಡಾರ್ಕ್ ವೆಬ್ ಮೂಲಕ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಡಿಯೋ ಮಾರಾಟ ಮಾಡಿದ್ದಾನೆ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.
5 ರಿಂದ 16 ವರ್ಷದೊಳಗಿನ ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದು ಇವರು ಬಂಡಾ, ಚಿತ್ರಕೂಟ ಮತ್ತು ಹಮಿರ್ ಪುರ್ ಪ್ರದೇಶದಿಂದ ಬಂದವರಾಗಿದ್ದಾರೆ ಎಂದು ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ನಿವಾಸದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 8 ಮೊಬೈಲ್ ಫೋನ್, 8 ಲಕ್ಷ ರೂಪಾಯಿ ನಗದು, ಲೈಂಗಿಕ ಆಟಿಕೆಗಳು, ಲ್ಯಾಪ್ಟಾಪ್ ಮತ್ತಿತರ ಡಿಜಿಟಲ್ ಸಾಕ್ಷ್ಯಗಳು ಪತ್ತೆಯಾಗಿವೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಸ್ತುಗಳು ಸೇರಿವೆ. ಲ್ಯಾಪ್ ಟಾಪ್ ಕಂಡುಬಂದ ಇಮೇಲ್ ಪರಿಶೀಲನೆಯಲ್ಲಿ ಮಕ್ಕಳ ವಿಡಿಯೋ ಹಂಚಿಕೊಂಡಿರುವುದು ಗೊತ್ತಾಗಿದೆ. ಆತನ್ನು ಕೋರ್ಟ್ ಗೆ ಹಾಜರುಪಡಿಸಿ ವಿಚಾರಣೆಗೆ ಕಸ್ಟಡಿಗೆ ಪಡೆಯಲಾಗುವುದು ಎಂದು ಸಿಬಿಐ ಅಧಿಕಾರಿಗಳು ಹೇಳಿದ್ದಾರೆ.
ಜನವರಿಯಲ್ಲಿ ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಭಾರತದಲ್ಲಿ ಪ್ರತಿದಿನ 100 ಕ್ಕೂ ಹೆಚ್ಚು ಮಕ್ಕಳು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ. ಇದು ಹಿಂದಿನ ವರ್ಷಕ್ಕಿಂತ ಶೇಕಡ 22 ರಷ್ಟು ಹೆಚ್ಚಾಗಿದೆ. 2008 ರಿಂದ 2018 ರ ನಡುವೆ ಮಕ್ಕಳ ಮೇಲಿನ ಅಪರಾಧಗಳು 6 ಪಟ್ಟು ಜಾಸ್ತಿಯಾಗಿದೆ. ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣ ದಾಖಲಾಗಿದೆ.