ಬೆಂಗಳೂರು: ಕ್ಯಾಂಟೀನ್ ಮಾಲೀಕರಿಗೆ ಬಿಲ್ ಬಾಕಿ ಮೊತ್ತ ನೀಡಲು 50,000 ರೂ. ಲಂಚ ಸ್ವೀಕರಿಸುತ್ತಿದ್ದ ಕೊಟ್ಟಿಗೆಪಾಳ್ಯ ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆಯ ಆಡಳಿತಾಧಿಕಾರಿ ನದೀಮ್ ಸಿದ್ದಿಕಿ ಅವರನ್ನು ಸಿಬಿಐ ಬಂಧಿಸಿದೆ.
ರಾಷ್ಟ್ರೀಯ ಯುನಾನಿ ವೈದ್ಯಕೀಯ ಸಂಸ್ಥೆಯ ಕಚೇರಿ ಆವರಣದಲ್ಲಿ ನಾರಾಯಣ ಕುಂದಾಪುರ ಕ್ಯಾಂಟೀನ್ ನಡೆಸುತ್ತಿದ್ದು, ಸಂಸ್ಥೆಗೆ ಆಹಾರ ಸರಬರಾಜು ಮಾಡಿದ ಬಾಕಿ ಹಣ 3 ಲಕ್ಷ ರೂಪಾಯಿ ಕೊಡಬೇಕಿತ್ತು. ಇದನ್ನು ಪಾವತಿಸಲು 1.10 ಲಕ್ಷಕ್ಕೆ ನದೀಮ್ ಸಿದ್ದಿಕಿ ಬೇಡಿಕೆ ಇಟ್ಟಿದ್ದರು. ಈ ಕುರಿತು ನಾರಾಯಣ ಕುಂದಾಪುರ ಸಿಬಿಐ ಭ್ರಷ್ಟಾಚಾರ ನಿಗ್ರಹದಳದ ಬೆಂಗಳೂರು ಘಟಕಕ್ಕೆ ದೂರು ನೀಡಿದ್ದು, ಪ್ರಾಥಮಿಕ ವಿಚಾರಣೆ ಬಳಿಕ ಹಣಕ್ಕೆ ಬೇಡಿಕೆ ಇಟ್ಟಿರುವುದು ಗೊತ್ತಾಗಿ ಎಫ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಮೊದಲ ಹಂತದಲ್ಲಿ 50,000 ರೂ. ತರಕಾರಿ ಚೀಲದಲ್ಲಿ ಇಟ್ಟು ಆಡಳಿತ ಅಧಿಕಾರಿ ಮನೆಗೆ ತಲುಪಿಸಿದಾಗ ಸಿಬಿಐ ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಇನ್ಸ್ಪೆಕ್ಟರ್ ಕಿರಣ್ ರಾಜ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮನೆಯಲ್ಲಿ ಪರಿಶೀಲನೆ ನಡೆಸಿದಾಗ ಎರಡು ಲಕ್ಷ ರೂ. ನಗದು ಪತ್ತೆಯಾಗಿದೆ.