ಬೆಂಗಳೂರು : ಬೆಂಗಳೂರಲ್ಲಿ ‘ಕಾವೇರಿ’ ಕಿಚ್ಚು ಭುಗಿಲೆದ್ದಿದ್ದು, ನಿಷೇಧಾಜ್ಞೆ ಉಲ್ಲಂಘಿಸಿದ 200 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತಮಿಳುನಾಡಿಗೆ 5000 ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ವಿರೋಧಿಸಿ ಕರ್ನಾಟಕ ರೈತ ಸಂಘಟನೆಗಳು ಇಂದು ಬೆಂಗಳೂರು ಬಂದ್ ಗೆ ಕರೆ ನೀಡಿದೆ. ವಿಧಾನಸೌಧದಿಂದ ರಾಜಭವನಕ್ಕೆ ಮುತ್ತಿಗೆ ಹಾಕಲು ಮೆರವಣಿಗೆ ಹೊರಟಿದ್ದ 200 ಮಂದಿಯನ್ನು ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹಾಗೂ ಪ್ರವೀಣ್ ಶೆಟ್ಟಿ ಬಣವನ್ನು ಪೊಲೀಸರು ತಡೆದಿದ್ದಾರೆ. ವಾಟಾಳ್ ನಾಗರಾಜ್ ರನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೆಂಗಳೂರು ಪೊಲೀಸ್ ರಾಜ್ಯವಾಗಿದೆ. ಪ್ರತಿಭಟನೆ ಮಾಡುವುದಕ್ಕೆ ಬಿಡದೆ ನಮ್ಮನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರ ಮೂಲಕ ಸರ್ಕಾರ ಪ್ರತಿಭಟನಾಕಾರರನ್ನು ಹತ್ತಿಕ್ಕುತ್ತಿದೆ ಎಂದು ವಾಟಾಳ್ ವಾಗ್ಧಾಳಿ ನಡೆಸಿದ್ದಾರೆ.