ನವದೆಹಲಿ: ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ ಇಂದು ನಡೆಯಲಿದೆ. ರಾಜ್ಯದಲ್ಲಿನ ಬರ ಪರಿಸ್ಥಿತಿ ಗಮನಿಸಿ ಸಮಿತಿ ಈ ಬಾರಿ ತಮಿಳುನಾಡಿಗೆ ನೀರು ಹರಿಸುವ ಆದೇಶ ನೀಡುವುದಿಲ್ಲ ಎಂಬ ನಿರೀಕ್ಷೆ ರಾಜ್ಯಕ್ಕೆ ಇದೆ.
ಈಗಾಗಲೇ ಸಮಿತಿಯ ಎರಡು ಆದೇಶಗಳನ್ನು ರಾಜ್ಯ ಸರ್ಕಾರ ಪಾಲಿಸಿದ್ದು, ಮತ್ತೆ ನೀರು ಬಿಡುವುದು ಅಸಾಧ್ಯವೆಂದು ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿದೆ. ಸಮಿತಿ ಸಭೆ ಮುಂದೆ ಮಂಗಳವಾರ ಕೂಡ ಇದೆ ಅಭಿಪ್ರಾಯ ವ್ಯಕ್ತಪಡಿಸಲಿದೆ.
ಕೇಂದ್ರ ಜಲ ಆಯೋಗದ ಸದಸ್ಯ ವಿನಿತ್ ಗುಪ್ತಾ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಕರ್ನಾಟಕದಿಂದ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗುವುದು. ಈ ಹಿಂದಿನ ಎರಡು ಸಭೆಗಳಲ್ಲಿ 15 ದಿನಗಳ ಕಾಲ ಪ್ರತಿದಿನ 5,000 ಕ್ಯುಸೆಕ್ ನೀರು ಹರಿಸುವಂತೆ ಸಮಿತಿ ಸೂಚಿಸಿದ್ದು, ಈ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಎತ್ತಿ ಹಿಡಿದಿತ್ತು.
ಇದನ್ನು ಪ್ರಶ್ನಿಸಿ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸೆ. 21ರಂದು ವಿಚಾರಣೆ ವೇಳೆ ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿ ಎರಡು ವಾರಗಳ ಕಾಲ ವಿಚಾರಣೆ ಮುಂದೂಡಿದೆ.