ನವದೆಹಲಿ: ಇಂದು ಕಾವೇರಿ ನೀರು ನಿಯಂತ್ರಣ ಸಮಿತಿ(CWRC) ಸಭೆ ನಡೆಯಲಿದೆ. ಇಂದು ಮಧ್ಯಾಹ್ನ 2:30ಕ್ಕೆ ವರ್ಚುಯಲ್ ಮೂಲಕ ನಡೆಯುವ ಸಭೆಯಲ್ಲಿ ತಮಿಳುನಾಡಿಗೆ ನೀರು ಹರಿಸುವ ಬಗ್ಗೆ CWRC ತೀರ್ಮಾನಿಸಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಿದೆ.
ಕರ್ನಾಟಕ ಮತ್ತು ತಮಿಳುನಾಡು ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಕಳೆದ ತಿಂಗಳು CWRC ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆಗೆ ಶಿಫಾರಸು ಮಾಡಿದ್ದು, ತೀರ್ಮಾನವನ್ನು ಪ್ರಾಧಿಕಾರ ಒಪ್ಪಿಕೊಂಡಿತ್ತು. ಸೆಪ್ಟೆಂಬರ್ 12ರವರೆಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಪ್ರಾಧಿಕಾರ ನಿರ್ದೇಶನ ನೀಡಿದ್ದು, ಪ್ರಾಧಿಕಾರ ನಿಗದಿಪಡಿಸಿದಷ್ಟು ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಲಾಗಿದೆ. ಇಂದು ನಡೆಯಲಿರುವ ಸಭೆಯಲ್ಲಿ ಯಾವ ತೀರ್ಮಾನ ಕೈಗೊಳ್ಳಲಾಗುವುದು ಎಂಬುದನ್ನು ಕಾದುನೋಡಬೇಕಿದೆ.