ಮಡಿಕೇರಿ: ಸಂಜೆ 7 23ಕ್ಕೆ ಮೇಷ ಲಗ್ನದಲ್ಲಿ ಕಾವೇರಿ ತೀರ್ಥೋದ್ಭವ ಆಗಿದೆ. ತೀರ್ಥೋದ್ಭವದ ಹಿನ್ನೆಲೆಯಲ್ಲಿ ಸಂಜೆ 5.30 ರಿಂದಲೇ ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಲಾಗಿದೆ.
ಕಾವೇರಿ ಸಹಸ್ರನಾಮ, ಮಹಾ ಮಂಗಳಾರತಿ, ಕುಂಕುಮಾರ್ಚನೆ ಸೇರಿದಂತೆ ಹಲವು ಪೂಜಾ ಕಾರ್ಯಗಳು ನೆರವೇರಿವೆ. ಪ್ರಧಾನ ಅರ್ಚಕ ಗುರುರಾಜ ಆಚಾರ್ ನೇತೃತ್ವದಲ್ಲಿ ಪೂಜೆ ಪುನಸ್ಕಾರ ನೆರವೇರಿಸಲಾಗಿದ್ದು, ಅಪಾರ ಸಂಖ್ಯೆಯ ಭಕ್ತರು ಕಾವೇರಿ ತೀರ್ಥೋತ್ಸವ ಕಣ್ತುಂಬಿಕೊಳ್ಳಲು ಆಗಮಿಸಿದ್ದಾರೆ. ತೀರ್ಥೋದ್ಭವ ಹಿನ್ನೆಲೆಯಲ್ಲಿ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಭದ್ರತೆ ಕೈಗೊಳ್ಳಲಾಗಿದೆ.
ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆ ವತಿಯಿಂದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ರಾತ್ರಿ 7 ಗಂಟೆ 23 ನಿಮಿಷಕ್ಕೆ ಸಲ್ಲುವ ಮೇಷ ಲಗ್ನದಲ್ಲಿ ಶ್ರೀ ಮೂಲ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವದ ಪುಣ್ಯ ಕಾಲ ನೆರವೇರಿದೆ.
ಬ್ರಹ್ಮಕುಂಡಿಕೆಯಲ್ಲಿ ಜೀವನದಿ ಕಾವೇರಿ ದರ್ಶನವಾಗಿದೆ. ಆರತಿ ಆಗುತ್ತಿದ್ದಂತೆ ಬ್ರಹ್ಮ ಕುಂಡಿಕೆಯಲ್ಲಿ ಜೀವ ಜಲ ಉಕ್ಕಿದೆ. ಅಪಾರ ಸಂಖ್ಯೆಯ ಭಕ್ತರು ಕಾವೇರಿ ತೀರ್ಥೋದ್ಭವ ಕಣ್ತುಂಬಿಕೊಂಡು ಕಾವೇರಮ್ಮ ಕಾಪಾಡಮ್ಮ ಎಂದು ಬೇಡಿಕೊಂಡಿದ್ದಾರೆ.