ಮಂಡ್ಯ : ಕಾವೇರಿ ನದಿ ನೀರು ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಆದೇಶ ಖಂಡಿಸಿ ಸೆ.23 ರಂದು ಮಂಡ್ಯ ಬಂದ್ ಗೆ ಕರೆ ನೀಡಲಾಗಿದೆ.
ರೈತ ಹಿತ ರಕ್ಷಣಾ ಸಮಿತಿ ಹಾಗೂ ಕನ್ನಡ ಪರ ಸಂಘಟನೆಗಳು ನಾಡಿದ್ದು ಸೆ.23 ರಂದು ಮಂಡ್ಯ ಬಂದ್ ಗೆ ಕರೆ ನೀಡಿದೆ. ಈ ಹಿನ್ನೆಲೆ ಬಂದ್ ಬಗ್ಗೆ ನಾಳೆ ಮಹತ್ವದ ಸಭೆ ನಡೆಸಲಾಗುತ್ತಿದೆ.
ಕಾವೇರಿ ನೀರಿಗಾಗಿ ರಾಜ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ರಾಜ್ಯದ ವಿವಿಧ ಕಡೆ ರೈತರು, ಕನ್ನಡ ಪರ ಸಂಘಟನೆ ಹೋರಾಟಗಾರರು ಪ್ರತಿಭಟನೆ ನಡೆಸಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಸಂಬಂಧ ಇಂದು ಸುಪ್ರೀಂಕೋರ್ಟ್ ನಲ್ಲಿ ಮಹತ್ವದ ವಿಚಾರಣೆ ನಡೆದಿದ್ದು, ಕರ್ನಾಟಕ ಪ್ರತಿದಿನ 5,000 ಕ್ಯೂಸೆಕ್ ನೀರು ಹರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ.
ಕಾಂಗ್ರೆಸ್ ಸರ್ಕಾರ ಕನ್ನಡನಾಡಿಗೆ ದ್ರೋಹ ಬಗೆದಿದೆ : ಬಿಜೆಪಿ
ಕಾವೇರಿ ನದಿ ನೀರಿನ ಹಂಚಿಕೆಯ ವಿಚಾರದಲ್ಲಿ ಸರ್ಕಾರದ ಢೋಂಗಿತನ ಮತ್ತೊಮ್ಮೆ ಬಯಲಾಗಿದೆ. ಸುಪ್ರೀಂಕೋರ್ಟ್ನಲ್ಲಿ ಕರ್ನಾಟಕದ ಪರ ಸಮರ್ಥವಾಗಿ ವಾದ ಮಂಡಿಸುವಲ್ಲಿ ಸಿದ್ದರಾಮಯ್ಯ ಅವರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು, ಮಿತ್ರಪಕ್ಷ ಡಿಎಂಕೆಯ ಸರ್ಕಾರದ ಮುಂದೆ ಮಂಡಿಯೂರಿ ಕುಳಿತು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ. ತಮಿಳುನಾಡಿಗೆ ಪ್ರತಿದಿನ 5000 ಕ್ಯೂಸೆಕ್ಸ್ ನೀರು ಬಿಡಲು ಸಿದ್ದರಾಮಯ್ಯರವರ ಸರ್ಕಾರ ಒಪ್ಪಿಕೊಂಡು ಬಂದಿದೆ. ಕನ್ನಡಿಗರು ನೀರಿಲ್ಲದೆ ಪರಿತಪಿಸುತ್ತಿದ್ದರೂ ಪರವಾಗಿಲ್ಲ, ಕಾಂಗ್ರೆಸ್ಸಿಗೆ I.N.D.I.Alliance ಮೈತ್ರಿಕೂಟ ಉಳಿದುಕೊಳ್ಳಬೇಕಿದೆ. “ನಾನು ಸತ್ತಂತೆ ಮಾಡುವೆ, ನೀನು ಅತ್ತಂತೆ ಮಾಡು” ಎನ್ನುವ ಧೋರಣೆಯ ಮೂಲಕ ಕಾಂಗ್ರೆಸ್ ಸರ್ಕಾರ ಕನ್ನಡನಾಡಿಗೆ ದ್ರೋಹ ಬಗೆದಿದೆ. ಕೊಡಗಿನ ಕಾವೇರಿಯ ಕೊನೆ ಹನಿ ಕೂಡ ತಮಿಳುನಾಡು ಪಾಲಾಗುವುದು ನಿಶ್ಚಿತ ಎಂದು ಬಿಜೆಪಿ ಕಿಡಿಕಾರಿದೆ.