ಬೆಂಗಳೂರು: ತೀವ್ರ ಮಳೆ ಕೊರತೆಯಿಂದಾಗಿ ಕಾವೇರಿ ಜಲಾನಯನ ಪ್ರದೇಶದ ಡ್ಯಾಮ್ ಗಳು ಭರ್ತಿಯಾಗದೇ ತಮಿಳುನಾಡಿಗೆ ಹಂಚಿಕೆಯಾದಷ್ಟು ನೀರು ಬಿಡಲು ಸಾಧ್ಯವಾಗಿಲ್ಲ.
ಈ ಸಂದರ್ಭದಲ್ಲಿ ಸಂಕಷ್ಟ ಹಂಚಿಕೆ ಸೂತ್ರ ಸಿದ್ಧಪಡಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಉದ್ದೇಶದಿಂದ ದೆಹಲಿಗೆ ಸರ್ವ ಪಕ್ಷ ನಿಯೋಗ ಹೋಗಲು ತೀರ್ಮಾನಿಸಲಾಗಿದೆ.
ಮಳೆ ಕೊರತೆಯಿಂದ ತಮಿಳುನಾಡಿಗೆ ನೀರು ಹರಿಸಲಾಗದೆ ಸಂಕಷ್ಟದ ಪರಿಸ್ಥಿತಿ ಉಂಟಾಗಿದೆ. ಕಾವೇರಿ ಸೇರಿ ಅಂತರರಾಜ್ಯ ಜಲವಿವಾದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸರ್ವ ಪಕ್ಷ ನಿಯೋಗ ಕರೆದೊಯ್ದು ಇದು ಒತ್ತಡ ಹೇರಲು ಸರ್ವ ಪಕ್ಷ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಸದ್ಯದ ಪರಿಸ್ಥಿತಿ ನಿರ್ವಹಿಸಲು ಸಂಕಷ್ಟ ಸೂತ್ರ ರಚಿಸುವಂತೆ ಕೇಂದ್ರಕ್ಕೆ ಒತ್ತಡ ಹೇರಲಾಗುವುದು. ಭವಿಷ್ಯದಲ್ಲಿಯೂ ಇಂತಹ ಸಂಕಷ್ಟಗಳನ್ನು ಎದುರಿಸಲು ಪರಿಹಾರವಾಗಿರುವ ಮೇಕೆದಾಟು ಯೋಜನೆಗೆ ಅನುಮತಿ ನೀಡುವಂತೆ ಮನವಿ ಮಾಡಲಾಗುತ್ತದೆ. ಆಗಸ್ಟ್ 25ರಂದು ಸುಪ್ರೀಂ ಕೋರ್ಟ್ ನಲ್ಲಿ ನಡೆಯುವ ವಿಚಾರಣೆಯಲ್ಲಿ ಸಮರ್ಥವಾಗಿ ವಾದ ಮಂಡಿಸುವಂತೆ ಸರ್ಕಾರ ಪ್ರತಿನಿಧಿಸುವ ವಕೀಲರ ತಂಡಕ್ಕೆ ಸೂಚನೆ ನೀಡಲಾಗಿದ್ದು, ರಾಜ್ಯದ ರೈತರು ಮತ್ತು ಸಾರ್ವಜನಿಕರ ಹಿತ ಸೇರಿದಂತೆ ಒಟ್ಟಾರೆಯಾಗಿ ರಾಜ್ಯಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ಬೆಂಬಲ ನೀಡುವುದಾಗಿ ಪ್ರತಿಪಕ್ಷಗಳು ತಿಳಿಸಿವೆ.