ಕರ್ನಾಟಕದ ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ಆರರಿಂದ ಏಳು ಟಿಎಂಸಿ ನೀರು ಹರಿಸುವಂತೆ ಕಾವೇರಿ ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ. ಹಲ್ದರ್ ಸೂಚನೆ ನೀಡಿದ್ದಾರೆ. ದೆಹಲಿಯಲ್ಲಿ ಇಂದು ನಡೆದ 13ನೇ ಪ್ರಾಧಿಕಾರದ ಸಭೆಯಲ್ಲಿ ಹಲ್ದರ್ ಈ ಸೂಚನೆ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶದಂತೆ ಆಗಸ್ಟ್ ತಿಂಗಳ ಅಂತ್ಯದೊಳಗಾಗಿ 86 ಟಿಎಂಸಿ ನೀರು ಬಿಡುಗಡೆ ಮಾಡಬೇಕಿತ್ತು. ಆದರೆ ಹವಾಮಾನ ಇಲಾಖೆ ನೀಡಿರುವ ವರದಿ ಆಧರಿಸಿ ಕೆಆರ್ಎಸ್ ಜಲಾಶಯದ ಭಾಗದಲ್ಲಿರುವ ಪ್ರಸ್ತುತ ಪರಿಸ್ಥಿತಿಯನ್ನು ವಿವರಿಸಿದ ಕರ್ನಾಟಕದ ಅಧಿಕಾರಿಗಳು ನೀರು ಬಿಡುಗಡೆ ಪ್ರಮಾಣದಲ್ಲಿ ವಿನಾಯ್ತಿ ಕೇಳಿದ್ದಾರೆ.
ಕಾವೇರಿ ತೀರದಲ್ಲಿ ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಹೀಗಾಗಿ ಕೆಆರ್ಎಸ್ ಜಲಾಶಯ ಕೂಡ ತುಂಬಿಲ್ಲ. ಈ ಬಾರಿ ಮಳೆಯಲ್ಲಿ 25 ಪ್ರತಿಶತ ಕೊರತೆ ಕಂಡುಬಂದಿದೆ. ಹೀಗಾಗಿ ಜೂನ್ ಹಾಗೂ ಜುಲೈ ತಿಂಗಳ ಪಾಲಿನ ನೀರನ್ನು ಸದ್ಯಕ್ಕೆ ಬಿಡುಗಡೆ ಮಾಡುವುದು ಸಾಧ್ಯವಿಲ್ಲ ಎಂದು ಕರ್ನಾಟಕದ ಅಧಿಕಾರಿಗಳು ಸಭೆಯಲ್ಲಿ ವಿವರಿಸಿದ್ದಾರೆ.
ಕರ್ನಾಟಕವು ಆಗಸ್ಟ್ ಅಂತ್ಯದ ವೇಳೆಗೆ ತಮಿಳುನಾಡಿಗೆ 86 ಟಿಎಂಸಿ ನೀರು ಬಿಡುಗಡೆ ಮಾಡಬೇಕಿತ್ತು. ಆದರೆ ಕರ್ನಾಟಕವು 57 ಟಿಎಂಸಿ ನೀರು ಬಿಡುಗಡೆ ಮಾಡಿರೋದಾಗಿ ಹೇಳಿದೆ. ಸೆಪ್ಟೆಂಬರ್ ತಿಂಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಹೀಗಾಗಿ ಸೆಪ್ಟೆಂಬರ್ ತಿಂಗಳಲ್ಲಿ ನೀರನ್ನು ಬಿಡುವಂತೆ ಸೂಚನೆ ನೀಡಿದ್ದೇನೆ. ಉತ್ತಮ ಮಳೆಯಾಗುತ್ತಿದ್ದಂತೆ ಬಾಕಿ ನೀರನ್ನು ಬಿಡುವಂತೆ ಹಲ್ದಾರ್ ಸಭೆಯಲ್ಲಿ ಸೂಚನೆ ನೀಡಿರೋದಾಗಿ ಹೇಳಿದ್ದಾರೆ.