ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ತಮಿಳುನಾಡಿಗೆ ಅ.15ವರೆಗೆ ಪ್ರತಿದಿನ 3000 ಕ್ಯೂಸೆಕ್ ನೀರು ಹರಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದ ಬೆನ್ನಲ್ಲೇ ರೈತರ ಪ್ರತಿಭಟನೆಗಳು ತೀವ್ರ ಸ್ವರೂಪ ಪಡೆದುಕೊಂಡಿದೆ.
ಕರ್ನಾಟಕದ ಗಡಿ ಭಾಗದಲ್ಲಿ ತಮಿಳುನಾಡು ವಾಹನಗಳಿಗೆ ತಡೆಯೊಡ್ಡಿ ರೈತ ಪರ ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಸತ್ಯಮಂಗಲಂ ಅರಣ್ಯ ಪ್ರದೇಶದ ಕಾರೆಪಾಳ್ಯ ಚಕ್ ಪೋಸ್ಟ್ ಬಳಿ ತಮಿಳುನಾಡು ನೋಂದಣಿ ಇರುವ ವಾಹನಗಳನ್ನು ತಡೆದ ರೈತರು, ತಮಿಳುನಾಡು ಸಿಎಂ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪ್ರತಿಭಟನಾ ನಿರತ ರೈತರನ್ನು ಪೊಲೀಸರು ತಡೆದಿದ್ದಾರೆ.
ಇನ್ನೊಂದೆಡೆ ಬೆಂಗಳೂರು, ಮಂಡ್ಯ ಭಾಗದಲ್ಲಿಯೂ ರೈತರು ಹಾಗೂ ಕನ್ನಡ ಪರ ಸಂಘಟನೆಗಳ ಪ್ರತಿಭಟನೆ ಭುಗಿಲೆದ್ದಿದ್ದು, ತಮಿಳು ಚಿತ್ರ ಪೋಸ್ಟರ್ ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.