ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿರುವ ಬೆನ್ನಲ್ಲೇ ರಾಜ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿದ್ದು, ಬೆಂಗಳೂರು, ಮಂಡ್ಯ, ಮದ್ದೂರು ಭಾಗದಲ್ಲಿ ಅನ್ನದಾತನ ಆಕ್ರೋಶ ತೀವ್ರ ಸ್ವರೂಪ ಪಡೆದಿದೆ.
ಮಂಡ್ಯ, ಮದ್ದೂರು ಬಂದ್ ಮಾಡಿ ಬೀದಿಗಿಳಿದು ಹೋರಾಟ ನಡೆಸಿರುವ ರೈತ ಸಂಘಟನೆ, ಕನ್ನಡಪರ ಸಂಘಟನೆ ಕಾರ್ಯಕರ್ತರು, ಬೆಂಗಳೂರು ಮೈಸೂರು ಹೆದ್ದಾರಿ ತಡೆ ನಡೆಸಿದ್ದಾರೆ. ಇನ್ನೊಂದೆಡೆ ರಸ್ತೆಯಲ್ಲಿಯೇ ಉರುಳುಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಗೆ ವಿದ್ಯಾರ್ಥಿಗಳು ಸಾಥ್ ನೀಡಿದ್ದಾರೆ.
ತಮಿಳುನಾಡಿಗೆ ಬಿಡುತ್ತಿರುವ ಕಾವೇರಿ ನೀರನ್ನು ತಕ್ಷಣ ನಿಲ್ಲಿಸಿ ರಾಜ್ಯದ ರೈತರ ಹಿತ ಕಾಯುವಂತೆ ಆಗ್ರಹಿಸಿದ್ದಾರೆ. ಮದ್ದೂರಿನಲ್ಲಿ ರಸ್ತೆಯಲ್ಲಿ ಟೈರ್ ಗಳಿಗೆ ಬೆಂಕಿ ಹಚ್ಚಿಸಿರುವ ಕನ್ನಡಪರ ಸಂಘಟನೆಗಳು ರಾಜ್ಯ ಸರ್ಕಾರ ಹಾಗೂ ತಮಿಳುನಾಡಿನ ವಿರುದ್ಧ ಕಿಡಿಕಾರಿದ್ದಾರೆ.
ಮಂಡ್ಯದಲ್ಲಿ ರೈತರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದು, ಬಾಯಿಗೆ ಮಣ್ಣು ಹಾಕಿ ರೈತರ ಬಾಯಿಗೆ ಮಣ್ಣು ಹಾಕಿದ ಸರ್ಕಾರಕ್ಕೆ ಧಿಕ್ಕಾರ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ದಾರೆ.
ಮತ್ತೊಂದೆಡೆ ಬೆಂಗಳೂರಿನ ಎಲೆಟ್ರಾನಿಕ್ ಸಿಟಿಯಲ್ಲಿಯೂ ಪ್ರತಿಭಟನೆ ಜೋರಾಗಿದ್ದು, ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರಕರ್ತರು ಧರಣಿ ನಡೆಸಿದ್ದಾರೆ. ಕರವೇ ನಾರಾಯಣಗೌಡ ಬಣ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದು, ಇದೇ ವೇಳೆ ತಮಿಳುನಾಡು ಸರ್ಕಾರದ ಭೂತ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.