ಬೆಂಗಳೂರು: ಅ. 15 ರವರೆಗೆ ಪ್ರತಿದಿನ ಮೂರು ಸಾವಿರ ಕ್ಯುಸೆಕ್ ಕಾವೇರಿ ನದಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದ್ದು, ಆದೇಶ ಪ್ರಶ್ನಿಸಿ ನಾಳೆಯೇ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
CWMA ಮತ್ತು ಸುಪ್ರೀಂ ಕೋರ್ಟ್ ನಲ್ಲಿ ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸುತ್ತೇವೆ. ಸುಪ್ರೀಂ ಕೋರ್ಟ್ ಮುಂದೆ ನಮ್ಮ ಕಷ್ಟ ಹೇಳಿಕೊಳ್ಳಲು ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗುವುದು ಎಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಹೇಳಿದ್ದಾರೆ.
ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ಎಜಿಗಳ ಜೊತೆ ಸಭೆ ನಡೆಸಿದ ಬಳಿಕ ಸಿಎಂ ಮಾಹಿತಿ ನೀಡಿದ್ದಾರೆ. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ಸಲಹೆ ಪಡೆದಿದ್ದೇವೆ. ನಿವೃತ್ತ ನ್ಯಾಯಮೂರ್ತಿಗಳು, ಮಾಜಿ ಎಜಿಗಳು ತಮ್ಮ ಅನುಭವದ ಮೇಲೆ ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಿದ್ದಾರೆ. ತಜ್ಞರ ಸಲಹಾ ಸಮಿತಿ ರಚಿಸುವುದು ಒಳ್ಳೆಯದು ಎಂದು ಹೇಳಿದ್ದಾರೆ. ಕೇವಲ ಕಾವೇರಿ ಮಾತ್ರವಲ್ಲ, ಎಲ್ಲಾ ಜಲ ವಿವಾದಗಳ ಸಂಬಂಧ ಸಮಿತಿ ರಚಿಸಲು ಸಲಹೆ ನೀಡಲಾಗಿದೆ ಎಂದರು.
ಸರ್ಕಾರಕ್ಕೆ ಸಲಹೆ ಸೂಚನೆ ನೀಡಲು ತಜ್ಞರ ಸಮಿತಿ ರಚನೆಗೆ ಅಭಿಪ್ರಾಯ ವ್ಯಕ್ತವಾಗಿದೆ. ನೀರು ಹರಿಸಲು ಆಗಲ್ಲವೆಂದು ವಾದ ಮಂಡಿಸಿದ್ದರೂ ಇಷ್ಟೆಲ್ಲ ಮಾಹಿತಿ ನೀಡಿದರೂ ಮತ್ತೆ 3000 ಕ್ಯುಸೆಕ್ ನೀರು ಹರಿಸಲು ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ CWMA, ಸುಪ್ರೀಂ ಕೋರ್ಟ್ ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಲು ಸಲಹೆ ನೀಡಲಾಗಿದೆ ಎಂದರು.
ಮೇಕೆದಾಟು ಯೋಜನೆ ಬಗ್ಗೆ ಪ್ರಸ್ತಾಪಿಸಲು ಸಭೆಯಲ್ಲಿ ಸಲಹೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಜೊತೆ ಮಾತನಾಡಿ ಮನವೊಲಿಸುವಂತೆ ಹೇಳಿದ್ದಾರೆ. ಮೇಕೆದಾಟು ಅಣೆಕಟ್ಟು ನಿರ್ಮಿಸುವುದರಿಂದ ತಮಿಳುನಾಡಿಗೆ ಸಮಸ್ಯೆಯಾಗುವುದಿಲ್ಲ. ತಮಿಳುನಾಡಿಗೆ ಮನವರಿಕೆ ಮಾಡಿ ಕೇಂದ್ರ ಸರ್ಕಾರದ ಅನುಮತಿ ಪಡೆಯಬೇಕು. ಮೇಕೆದಾಟು ಯೋಜನೆ ಜಾರಿಯಾದರೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗಲಿದೆ. ತಮಿಳುನಾಡಿಗೆ ಅಗತ್ಯವಿದ್ದಾಗ ನೀರು ಹರಿಸಲು ಸಹಕಾರಿಯಾಗಲಿದೆ. ಜಲ ವಿದ್ಯುತ್ ಉತ್ಪಾದನೆಗೆ ಬಳಸಿದ ನೀರು ತಮಿಳುನಾಡಿಗೆ ಹರಿದು ಹೋಗುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.