ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾದ 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಮಹತ್ವಕಾಂಕ್ಷಿಯ ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆ ಸಮಾರಂಭ ಇಂದು ನಡೆಯಲಿದೆ.
ಅಕ್ಟೋಬರ್ 16 ರಂದು ಬೆಳಿಗ್ಗೆ 10.30 ಕ್ಕೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ತೊರೆಕಾಡನಹಳ್ಳಿಯ ಬೆಂಗಳೂರು ಜಲ ಮಂಡಳಿ ಆವರಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯೋಜನೆ ಲೋಕಾರ್ಪಣೆ ಮಾಡಲಿದ್ದಾರೆ.
4336 ಕೋಟಿ ರೂಪಾಯಿ ವೆಚ್ಚದ ಯೋಜನೆ ಇದಾಗಿದ್ದು, 110 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸಲಾಗುವುದು. 50 ಲಕ್ಷ ಜನರಿಗೆ ಅನುಕೂಲವಾಗುತ್ತದೆ. 10 ಟಿಎಂಸಿ ಕಾವೇರಿ ನೀರು ಬಳಕೆಗೆ ಅನುಮೋದನೆ ನೀಡಿದ್ದು, 775 ಎಂಎಲ್ಡಿ ನೀರು ಪೂರೈಕೆಯಾಗಲಿದೆ. 4 ಲಕ್ಷ ಹೊಸ ಸಂಪರ್ಕ ನೀಡಲಾಗುವುದು.
ಯೋಜನೆಯ ಲೋಕಾರ್ಪಣೆ ಸಮಾರಂಭದಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಹೆಚ್.ಡಿ. ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ರಾಜ್ಯ ಸಚಿವರಾದ ಕೆ.ಜೆ. ಚಾರ್ಜ್, ಚೆಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಜಮೀರ್ ಅಹ್ಮದ್ ಖಾನ್, ಬೈರತಿ ಸುರೇಶ್ ಉಪಸ್ಥಿತರಿರುವರು. ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.