ಮಧ್ಯಪ್ರದೇಶದ ರತ್ಲಾಮ್‌ನಲ್ಲಿರುವ ಶಿವ ದೇವಾಲಯಕ್ಕೆ ರಾತ್ರೋರಾತ್ರಿ ನುಗ್ಗಿದ ಇಬ್ಬರು ಕಳ್ಳರು ಶಿವನ ಸರ್ಪ ಮತ್ತು ಜಲಧಾರಿಯನ್ನು ಕದ್ದಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ.
ಕಳೆದ ವಾರ ನಡೆದ ಘಟನೆ ಮನುನಿಯಾ ಗ್ರಾಮದ ಮನುನಿಯಾ ಮಹಾದೇವ ದೇವಸ್ಥಾನದಲ್ಲಿ ನಡೆದಿದ್ದು, ಸಿಸಿ ಟಿವಿ ಕ್ಯಾಮೆರಾದಲ್ಲಿ ಇಂಚಿಂಚೂ ದಾಖಲಾಗಿದೆ. ಇಬ್ಬರು ವ್ಯಕ್ತಿಗಳು ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ಕೈಗೆ ಗ್ಲೌಸ್ ಧರಿಸಿದ್ದರು. ಶಿವನ ಲಿಂಗ ಕೀಳಲು ಪ್ರಯತ್ನ ಮಾಡಿದ್ದು ಬಳಿಕ ಸರ್ಪ ಮತ್ತು ಜಲಧಾರಿಯನ್ನು ಕೋಲಿನಿಂದ ಒಡೆದು ತೆಗೆದುಕೊಂಡು ಹೋಗಿದ್ದಾರೆ. ಶಿವಲಿಂಗದ ಅಲಂಕಾರಕ್ಕೆ ಬಳಸುತ್ತಿದ್ದ ಬೆಳ್ಳಿ ಮತ್ತು ಚಿನ್ನವನ್ನೂ ತೆಗೆದುಕೊಂಡು ಹೋಗಿದ್ದಾರೆ. ಜೊತೆಗೆ, ಅವರು ಕಾಣಿಕೆ ಪೆಟ್ಟಿಗೆಯ ಬೀಗವನ್ನು ಮುರಿಯಲು ಪ್ರಯತ್ನ ನಡೆಸಿದ್ದು ಸಾಧ್ಯವಾಗಲಿಲ್ಲ.
ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಪ್ರತಿಭಟನೆ ನಡೆಸಿ ತಾಲ್ ನಗರದಲ್ಲಿ ಹರತಾಳಕ್ಕೆ ಕರೆ ನೀಡಿದ್ದಾರೆ. ಆ ನಗರದ ಪಾಟಿದಾರ್ ಸಮಾಜವು ಕಳ್ಳರನ್ನು ಬಂಧಿಸುವಂತೆ ಒತ್ತಾಯಿಸಿ ಎಸ್‌ಡಿಎಂ ಮನೀಶಾ ವಾಸ್ಕೆ ಅವರಿಗೆ ಮನವಿ ಸಲ್ಲಿಸಿದೆ. ಕಳ್ಳರ ಗುರುತು ಇನ್ನೂ ಪತ್ತೆಯಾಗಿಲ್ಲ.