ಮುಂಬೈ ಹೊರವಲಯದ ಮೀರಾ ರಸ್ತೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಕುಡಿದ ಮತ್ತಿನಲ್ಲಿದ್ದ ಆಟೋ ರಿಕ್ಷಾ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಹಲವು ಬಾರಿ ಆಟೋ ಚಲಾಯಿಸಿ ಹತ್ಯೆ ಮಾಡಲು ಪ್ರಯತ್ನಿಸಿದ್ದಾನೆ. ದರದ ಬಗ್ಗೆ ವಾಗ್ವಾದ ನಡೆದ ನಂತರ ಈ ಘಟನೆ ಸಂಭವಿಸಿದೆ. ಈ ಆಘಾತಕಾರಿ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಚಾಲಕನ ನಿರ್ಲಕ್ಷ್ಯದ ವರ್ತನೆಯನ್ನು ತೋರಿಸುತ್ತದೆ.
ಅಧಿಕಾರಿಗಳ ಪ್ರಕಾರ, ಫೆಬ್ರವರಿ 18 ರ ರಾತ್ರಿ ಈ ಘಟನೆ ನಡೆದಿದೆ. ಸಂತ್ರಸ್ತ ಜಿತೇಂದ್ರ, ದೆಹಲಿಯಿಂದ ಮುಂಬೈಗೆ ಆಗಮಿದ್ದು, ವಿಮಾನ ನಿಲ್ದಾಣದಿಂದ ಆಟೋ ರಿಕ್ಷಾವನ್ನು ಬಾಡಿಗೆಗೆ ಪಡೆದರು. ಮೀಟರ್ ಪ್ರಕಾರ ದರವು 500 ರೂಪಾಯಿಗಳಾಗಿತ್ತು, ಆದರೆ ಚಾಲಕ 800 ರೂಪಾಯಿಗಳನ್ನು ಕೇಳಿದ್ದಾನೆ. ಜಿತೇಂದ್ರ ಹೆಚ್ಚುವರಿ ಹಣವನ್ನು ಪಾವತಿಸಲು ನಿರಾಕರಿಸಿದಾಗ, ಇಬ್ಬರ ನಡುವೆ ವಾಗ್ವಾದ ನಡೆದಿದೆ.
ಪರಿಸ್ಥಿತಿ ತೀವ್ರಗೊಂಡಿದ್ದು, ಕುಡಿದ ಮತ್ತಿನಲ್ಲಿದ್ದ ಚಾಲಕ ಜಿತೇಂದ್ರನ ಮೇಲೆ ಹಲವು ಬಾರಿ ಆಟೋ ಚಲಾಯಿಸಿ ಹತ್ಯೆ ಮಾಡಲು ಪ್ರಯತ್ನಿಸಿದ್ದಾನೆ. ಈ ಸಂಪೂರ್ಣ ಘಟನೆಯು ಸಿಸಿಟಿವಿಯಲ್ಲಿ ದಾಖಲಾಗಿದೆ.
ಈ ಘಟನೆಯ ನಂತರ ಜಿತೇಂದ್ರ ಮೀರಾ ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿಸಿದ್ದಾರೆ. ಆದರೆ, ತಕ್ಷಣ ಎಫ್‌ಐಆರ್ ದಾಖಲಿಸಲಾಗಿರಲಿಲ್ಲ. ಫೆಬ್ರವರಿ 21 ರಂದು ಪೊಲೀಸರು ಕ್ರಮ ಕೈಗೊಂಡು ಅಧಿಕೃತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಚಾಲಕ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ.