ಝಾನ್ಸಿ: ಝಾನ್ಸಿಯ ರೈಲ್ವೇ ಕೋರ್ಟ್ ಗೆ ಹಾಜರುಪಡಿಸಲು ಕರೆತರಲಾಗಿದ್ದ ಮೂವರು ಕೈದಿಗಳು ಪೊಲೀಸರ ವಶದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂಪೂರ್ಣ ಘಟನೆ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನ್ಯಾಯಾಲಯದ ಆವರಣದ ಹೊರಗೆ ನಿಂತಿದ್ದ ಪೊಲೀಸ್ ವ್ಯಾನ್ ನೊಳಗೆ ಮೂವರು ಆರೋಪಿಗಳು ಹೇಗೆ ತಪ್ಪಿಸಿಕೊಂಡರು ಎಂಬುದನ್ನು ವೈರಲ್ ವೀಡಿಯೊ ತೋರಿಸುತ್ತದೆ. ಪೊಲೀಸ್ ಅಧಿಕಾರಿಗಳು ವ್ಯಾನ್ ಗಮನಿಸದೆ ಕೈದಿಗಳಿಗೆ ವಾಹನದ ಬಾಗಿಲು ತೆರೆದು ಓಡಿಹೋಗಲು ಅವಕಾಶ ಮಾಡಿಕೊಟ್ಟಿದ್ದಾರೆ.
ಸೆಪ್ಟೆಂಬರ್ 19 ರಂದು ಮಧ್ಯಾಹ್ನ 1:40 ರ ಸುಮಾರಿಗೆ ಈ ಘಟನೆ ನಡೆದಿದೆ. ಸುಮಾರು 11 ಪೊಲೀಸರು, ಅಧಿಕಾರಿಗಳು 7 ಕೈದಿಗಳನ್ನು ಝಾನ್ಸಿಯ ರೈಲ್ವೇ ಕೋರ್ಟ್‌ಗೆ ಸಾಗಿಸುವ ಜವಾಬ್ದಾರಿಯನ್ನು ಹೊಂದಿದ್ದರು. ವ್ಯಾನ್ ನಲ್ಲಿದ್ದ 7 ಮಂದಿಯಲ್ಲಿ ಮೂವರು ಪರಾರಿಯಾಗಿದ್ದಾರೆ.
ರಾರಿಯಾದ ಕೈದಿಗಳನ್ನು ಬ್ರಿಜೇಂದ್ರ(27), ಶೈಲೇಂದ್ರ(20), ಮತ್ತು ಜ್ಞಾನಪ್ರಸಾದ್ (23) ಎಂದು ಗುರುತಿಸಲಾಗಿದೆ, ರೈಲ್ವೆ ನಿಲ್ದಾಣಗಳಿಂದ ಮೊಬೈಲ್ ಫೋನ್ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು.
ಪರಾರಿಯಾದ ಕೈದಿಗಳು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಮೂವರು ಸಬ್ ಇನ್ಸ್ ಪೆಕ್ಟರ್‌ಗಳು ಸೇರಿದಂತೆ 8 ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಪ್ರಕರಣದ ತನಿಖೆಗೆ ವಿಶೇಷ ಸಮಿತಿ ರಚಿಸಲಾಗಿದ್ದು, ಪರಾರಿಯಾಗಿರುವವರ ಪತ್ತೆಗೆ ಎರಡು ಹೆಚ್ಚುವರಿ ತಂಡಗಳನ್ನು ರಚಿಸಲಾಗಿದೆ.