ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ಕಾಶಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರ ಕಾರ್ಯಕ್ರಮದ ವೇದಿಕೆಯನ್ನು ಹತ್ತಿದ ನಂತರ ಚಾಕು ಹಿಡಿದು ದಾಂಧಲೆ ನಡೆಸಿದ ಆರೋಪದ ಮೇಲೆ 45 ವರ್ಷದ ವ್ಯಕ್ತಿಯೋರ್ವನನ್ನ ಬಂಧಿಸಲಾಗಿದೆ.
ರಾವತ್ ಮುಖ್ಯ ಅತಿಥಿಯಾಗಿದ್ದ ಕಾಂಗ್ರೆಸ್ ಕಾರ್ಯಕ್ರಮಕ್ಕೆ ನೆರೆದಿದ್ದ ಜನಸಮೂಹದಲ್ಲಿ ಈ ವ್ಯಕ್ತಿ ಹಾಜರಿದ್ದರು. ರಾವತ್ ಅವರ ಭಾಷಣದ ನಂತರ, ವ್ಯಕ್ತಿ ಚಾಕುವನ್ನು ತಿರುಗಿಸುತ್ತಾ ವೇದಿಕೆಗೆ ಹತ್ತಿದ್ದು, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದಾನೆ. ಚಾಕುವಿನಿಂದ ಇರಿದು ಬಿಡುತ್ತೇನೆ ಎಂದು ಬೆದರಿಸಿದ್ದಾನೆ.
ಆದರೆ ವೇದಿಕೆಯಲ್ಲಿದ್ದ ಜನರು ಆತನನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯ ವಿರುದ್ಧ ಅಕ್ರಮವಾಗಿ ಚಾಕು ಸಾಗಿಸಿದ್ದಕ್ಕಾಗಿ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ.
ಶುಕ್ರವಾರ ಆರೋಪಿಯನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ಆರೋಪಿಯು ಮಾನಸಿಕವಾಗಿ ಅಸ್ವಸ್ಥನಾಗಿರುವಂತೆ ತೋರುತ್ತಿರುವುದರಿಂದ ಆತನನ್ನ ಪರೀಕ್ಷಿಸಲು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಚಂದ್ರಮೋಹನ್ ಸಿಂಗ್ ಮಾಹಿತಿ ನೀಡಿದ್ದಾರೆ.
ಒಂದು ವಾರದ ಹಿಂದೆ, ಅವನು (ಆರೋಪಿ) ವಿನಾಕಾರಣ ಕಾಶಿಪುರದ ಓವರ್ಹೆಡ್ ನೀರಿನ ಟ್ಯಾಂಕ್ ಮೇಲೆ ಹತ್ತಿದ್ದ. ಆತ ತನ್ನ ಪತ್ನಿಯೊಂದಿಗೆ ಯಾವಾಗಲು ಜಗಳವಾಡುತ್ತಿದ್ದು, ಈ ಹಿಂದೆ ಪೊಲೀಸ್ ಠಾಣೆಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿದ್ದ ಎಂದು ಸಿಂಗ್ ತಿಳಿಸಿದ್ದಾರೆ. ಸಧ್ಯ ಈ ಘಟನೆಯ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಘಟನೆಗೆ ಕಾಂಗ್ರೆಸ್ ನಿಂದ ತೀವ್ರ ವಿರೋಧ ವ್ಯಕ್ತವಾಗಿದೆ.