ವಿಲಕ್ಷಣ ಪ್ರಕರಣ ಒಂದರಲ್ಲಿ ಕಳ್ಳತನದ ಉದ್ದೇಶದಿಂದ ದೇವಾಲಯ ಪ್ರವೇಶಿಸಿದ ವ್ಯಕ್ತಿಯೊಬ್ಬ ಹುಂಡಿ ದೋಚುವ ಮುನ್ನ ದೇವರಿಗೆ ಪ್ರಾರ್ಥನೆ ಸಲ್ಲಿಸಿ ಬಳಿಕ ಹಣದೊಂದಿಗೆ ಪರಾರಿಯಾಗಿದ್ದಾನೆ. ಇಂತಹದೊಂದು ಘಟನೆ ಬುಧವಾರದಂದು ಮಹಾರಾಷ್ಟ್ರದ ಥಾಣೆ ನಗರದಲ್ಲಿ ನಡೆದಿದೆ.
ಬೆಳಗ್ಗೆ 8.30 ರ ಸುಮಾರಿಗೆ ರೈಲ್ವೆ ನಿಲ್ದಾಣದ ಬಳಿಯ ಕೊಪ್ರಿ ರಸ್ತೆಯಲ್ಲಿರುವ ಹನುಮಾನ್ ದೇಗುಲಕ್ಕೆ 30 ವರ್ಷ ಪ್ರಾಯದ ಈ ವ್ಯಕ್ತಿ ಪ್ರವೇಶಿಸಿದ್ದಾನೆ. ನಂತರ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದು, ಬಳಿಕ ಪಕ್ಕದಲ್ಲಿದ್ದ ಹುಂಡಿಯನ್ನು ತೆರೆದು ಅದರೊಳಗಿದ್ದ 15 ಸಾವಿರ ರೂಪಾಯಿಗಳನ್ನು ದೋಚಿಕೊಂಡು ಸಾವಕಾಶವಾಗಿ ಹೋಗಿದ್ದಾನೆ.
ಇದಾದ ಸ್ವಲ್ಪ ಹೊತ್ತಿನಲ್ಲಿ ದೇವಾಲಯಕ್ಕೆ ಬಂದ ಮಹಿಳೆಯೊಬ್ಬರು ಹುಂಡಿ ತೆರೆದಿರುವುದನ್ನು ಗಮನಿಸಿ ಸ್ಥಳದಲ್ಲಿದ್ದವರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಪೊಲೀಸರಿಗೆ ದೂರು ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಅವರು ಸಿಸಿ ಟಿವಿಯಲ್ಲಿ ಕಳ್ಳತನದ ಕೃತ್ಯ ದಾಖಲಾಗಿರುವ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.