ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಬೇಕೆಂದು ಕೆಲವರು ಅಪಾಯದ ಹಾದಿ ತುಳಿಯುತ್ತಿದ್ದಾರೆ. ಸುರಕ್ಷತೆಗೆ ಗುಡ್ ಬೈ ಹೇಳಿ ಸೆಲ್ಫಿಗಳಿಂದ ಜೀವಕ್ಕೆ ಹಾನಿ ಮಾಡಿಕೊಳ್ಳುತ್ತಿರುವ ಘಟನೆಗಳು ಸರ್ವೇಸಾಮಾನ್ಯವಾಗುತ್ತಿವೆ.
ಇತ್ತೀಚೆಗಷ್ಟೇ ವೈರಲ್ ಆಗಿರುವ ವಿಡಿಯೋದಲ್ಲಿ ಯುವತಿಯೊಬ್ಬಳು ಸೆಲ್ಫಿ ತೆಗೆಯಲು ಮುಂದಾದಾಗ ಬೈಕ್‌ನಿಂದ ಬಿದ್ದು ಅಪಘಾತಕ್ಕೀಡಾಗಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಲು ರಿಸ್ಕ್ ತೆಗೆದುಕೊಳ್ಳುವವರಿಗೆ ಇದು ಎಚ್ಚರಿಕೆಯ ಕರೆ ಘಂಟೆಯಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಜನಪ್ರಿಯತೆ ಪಡೆಯುವುದರ ಜೊತೆ ಸುರಕ್ಷತೆಗೆ ಆದ್ಯತೆ ನೀಡುವುದು ಅತ್ಯಗತ್ಯವಾಗಿದೆ. ಈ ರೀತಿಯ ಸಂದರ್ಭದಲ್ಲಿ ಅಪಾಯಗಳ ಬಗ್ಗೆಯು ಗಮನಹರಿಸುವ ಅಗತ್ಯವಿದೆ.
ಟ್ವಿಟ್ಟರ್ ನಲ್ಲಿ ಮೊಮೆಂಟೊವೈರಲ್ ಎಂಬ ಹೆಸರಿನ ಖಾತೆಯಲ್ಲಿ ಈ ಆಘಾತಕಾರಿ ವೀಡಿಯೊ ಪೋಸ್ಟ್ ಮಾಡಲಾಗಿದೆ. ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸುವಾಗ ಯುವತಿ ಅಪಘಾತಕ್ಕೀಡಾದ ದೃಶ್ಯ ಈ ವಿಡಿಯೋದಲ್ಲಿ ಸೆರೆಯಾಗಿದೆ.
ಬೈಕ್ ರ್ಯಾಲಿಯೊಂದರಲ್ಲಿ ಈ ಘಟನೆ ನಡೆದಿದ್ದು ಅಲ್ಲಿ ಪ್ರೇಕ್ಷಕರು ಮತ್ತು ಬೈಕರ್‌ಗಳು ಒಟ್ಟಿಗೆ ಸೇರಿರುತ್ತಾರೆ. ರ್ಯಾಲಿಯ ಮಧ್ಯೆ ಒಬ್ಬ ಬೈಕ್ ಸವಾರನು ಬೈಕಿನ ಮುಂಭಾಗದ ಟೈರ್ ಎತ್ತಿ ಬೈಕ್ ವಿಲೀಂಗ್ ಮಾಡುತ್ತಾನೆ.
ಈ ಸಂದರ್ಭ ಬೈಕ್‌ನಲ್ಲಿ ಕುಳಿತ ಯುವತಿ ಸೆಲ್ಫಿ ತೆಗೆಯಲು ಪ್ರಯತ್ನಿಸುತ್ತಾಳೆ. ಆದ್ರೆ ಅಚಾನಕ್ಕಾಗಿ ಮತ್ತೊಂದು ಬೈಕ್ ಅತಿವೇಗದಲ್ಲಿ ಬಂದು ನೇರವಾಗಿ ಯುವತಿಯಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಯುವತಿ ಬೈಕ್ ನಿಂದ ರಸ್ತೆಗೆ ಬಿದ್ದಿದ್ದಾಳೆ. ಬಿದ್ದ ರಭಸಕ್ಕೆ ಬಲವಾದ ಹೊಡೆತ ಬಿದ್ದಿದೆ.
ಈ ವಿಡಿಯೋ ಕೆಲವೇ ನಿಮಿಷಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು 3.2 ಮಿಲಿಯನ್ ವ್ಯೂವ್ಸ್ ಪಡೆದಿದೆ. ಹಲವಾರು ಮಂದಿ ಕಾಮೆಂಟ್ ಗಳನ್ನು ಸಹ ಮಾಡಿದ್ದಾರೆ. ಕೆಲವರು ಕಾಳಜಿಯನ್ನು ವ್ಯಕ್ತಪಡಿಸಿ ಹುಡುಗಿಗಾದ ಗಾಯಗಳ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ. ಆದರೆ ವ್ಯಕ್ತಿಯೊಬ್ಬರು ಹುಡುಗಿ ಬದುಕುಳಿದಿದ್ದಾಳೆ. ಈ ಘಟನೆ ನಂತರದ ವೀಡಿಯೊವನ್ನು ತನ್ನ ಖಾತೆಯಲ್ಲಿ ಪೋಸ್ಟ್ ಮಾಡಿರೋದಾಗಿ ಹೇಳಿದ್ದಾರೆ.
ಇನ್ನು ಈ ಘಟನೆಯು ಅಜಾಗರೂಕತೆಯಿಂದ ಕೂಡಿದ ಚಾಲನೆಯಿಂದಾಗಿ ಏನೇನು ಆಗುತ್ತೆ ಎಂಬುದನ್ನು ತೋರಿಸಿಕೊಟ್ಟಿದೆ. ಇದರ ಜೊತೆ ವೈಯಕ್ತಿಕ ಸುರಕ್ಷತೆಗಿಂತ ಸಾಮಾಜಿಕ ಜಾಲತಾಣಗಳ ಖ್ಯಾತಿಗೆ ಆದ್ಯತೆ ನೀಡಿದ್ರೆ ಆಗುವ ಅಪಾಯಗಳ ಬಗ್ಗೆ ಬೆಳಕು ಚೆಲ್ಲಿದೆ. ಇನ್ನು ಅಜಾಗರೂಕ ಚಾಲನೆಯಿಂದಾಗುವ ಪರಿಣಾಮಗಳನ್ನು ಎತ್ತಿ ತೋರಿಸುವ ವೀಡಿಯೊವನ್ನು ದೆಹಲಿ ಪೊಲೀಸರು ಇತ್ತೀಚೆಗೆ ಟ್ವೀಟ್ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಜೋಡಿಯೊಂದು ಬೈಕ್ ಓಡಿಸುತ್ತಿರುವುದನ್ನು ಮತ್ತು ಅಜಾಗರೂಕ ವರ್ತನೆಯಲ್ಲಿ ಭಾಗಿಯಾಗಿರೋದು ಕಂಡು ಬಂದಿದೆ. ವೇಗವಾಗಿ ಸಂಚರಿಸುವಾಗ ಅಪಾಯಕಾರಿ ಸಾಹಸಗಳನ್ನು ಪ್ರದರ್ಶಿಸಿದ್ದರಿಂದ ಆದ ಪರಿಣಾಮವನ್ನು ಇದು ತೋರಿಸಿಕೊಟ್ಟಿದೆ.
ಇನ್ನು ಈ ಘಟನೆಗಳು ರಸ್ತೆಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮವನ್ನು ಬಳಸುವಾಗ ಜವಾಬ್ದಾರಿಯುತವಾಗಿ ಇರಬೇಕೆಂದು ಒತ್ತಿ ಹೇಳುತ್ತಿವೆ. ಜಾಲತಾಣದಲ್ಲಿ ಪ್ರಸಿದ್ದಿ ಪಡೆಯುವ ಬದಲು ಸುರಕ್ಷತೆಗೆ ಆದ್ಯತೆ ನೀಡಿದ್ರೆ ಒಳ್ಳೆಯದು. ಅಜಾಗರೂಕತೆಯಿಂದ ಉಂಟಾಗುವ ಸಂಭಾವ್ಯ ಅಪಾಯಗಳ ಬಗ್ಗೆ ಎಚ್ಚರವಾಗಿರುವುದು ಬಹಳ ಮುಖ್ಯ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಾಗಿದೆ