ಜೈಪುರ: ರಾಜಸ್ಥಾನದ ಹನುಮನ್ಗಢ ಜಿಲ್ಲೆಯಲ್ಲಿ 29 ವರ್ಷದ ದಲಿತ ವ್ಯಕ್ತಿಯೊಬ್ಬನನ್ನು ಪ್ರೇಮ ಪ್ರಕರಣದಲ್ಲಿ ಹೊಡೆದು ಕೊಲೆ ಮಾಡಲಾಗಿದೆ.
ಆ ವ್ಯಕ್ತಿ ಒಬ್ಬ ಆರೋಪಿಯ ಪತ್ನಿಯೊಂದಿಗೆ ಸಂಬಂಧ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ 7 ರಂದು ಈ ಘಟನೆ ನಡೆದಿದ್ದು, ಕನಿಷ್ಠ ಆರು ಜನ ಜಗದೀಶ್ ಮೇಘ್ವಾಲ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಸಾಯುವವರೆಗೂ ಹೊಡೆದಿದ್ದಾರೆ.
ಘಟನೆಯ ದೃಶ್ಯವನ್ನು ಆರೋಪಿಗಳು ವಿಡಿಯೊ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಇದರಲ್ಲಿ ಅವರು ಜಗದೀಶ್ ಗೆ ಕುಡಿಯಲು ನೀರು ಕೊಡುತ್ತಾರೆ. ಆತನನ್ನು ಕೋಲುಗಳಿಂದ ಪದೇ ಪದೇ ಥಳಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬ ತನ್ನ ಮೊಣಕಾಲನ್ನು ಕುತ್ತಿಗೆಯ ಮೇಲೆ ಒತ್ತುತ್ತಿರುವುದನ್ನು ಸಹ ಕಾಣಬಹುದಾಗಿದೆ. ನಂತರ ಅವರು ಜಗದೀಶ್ ಶವವನ್ನು ಅವರ ಮನೆಯ ಹೊರಗೆ ಎಸೆದು ಹೋಗಿದ್ದಾರೆ.
ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 11 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮುಖೇಶ್, ಓಂ ಪ್ರಕಾಶ್ ಮತ್ತು ಹಂಸರಾಜ್ ಎಂಬ ಮೂವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಹಿಡಿಯಲು ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಪಿಲಿಬಂಗಾ ಎಸ್ಹೆಚ್ಒ ಇಂದರ್ ಕುಮಾರ್ ಹೇಳಿದರು.
ಸಂತ್ರಸ್ತೆಯ ಕುಟುಂಬದ ಸದಸ್ಯರು ಆರೋಪಿಯನ್ನು ಶೀಘ್ರ ಬಂಧಿಸಿ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿ ಶವವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದು, ಡಿಎಂ ರಂಜೀತ್ ಕುಮಾರ್ ಮೇಘ್ವಾಲ್ ಮೃತನ ಸಂಬಂಧಿಕರ ಮನವೊಲಿಸಿ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ.