2005 ರಲ್ಲಿ ನಡೆದಿದ್ದ ಉತ್ತರ ಪ್ರದೇಶ ಬಹುಜನ ಸಮಾಜವಾದಿ ಪಕ್ಷದ ಶಾಸಕ ರಾಜು ಪಾಲ್ ಅವರ ಕೊಲೆ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಎಂಬವರನ್ನ ಹಾಡಹಗಲೇ ಅವರ ನಿವಾಸದ ಸಮೀಪದಲ್ಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಶುಕ್ರವಾರ ಸಂಜೆ ಪ್ರಯಾಗ್ ರಾಜ್ ನಲ್ಲಿ ಈ ಘಟನೆ ನಡೆದಿದ್ದು, ಉಮೇಶ್ ಪಾಲ್ ತಮ್ಮ ನಿವಾಸದಿಂದ ಹೊರಬಂದು ಕಾರಿನ ಬಳಿ ಹೋಗುವಾಗ ದುಷ್ಕರ್ಮಿಗಳು ಮೊದಲಿಗೆ ಬಾಂಬ್ ಎಸೆದಿದ್ದಾರೆ. ಬಳಿಕ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಉಮೇಶ್ ಪಾಲ್ ಅವರಿಗೆ ಜೀವಭಯವಿದ್ದ ಕಾರಣ ಸರ್ಕಾರ ಗನ್ ಮ್ಯಾನ್ ಗಳನ್ನು ನೀಡಿದ್ದು, ಅವರಿಬ್ಬರ ಮೇಲೂ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಇದರ ಪರಿಣಾಮ ಓರ್ವ ಮೃತಪಟ್ಟಿದ್ದು ಮತ್ತೊಬ್ಬ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹತ್ಯೆಯ ದೃಶ್ಯಾವಳಿ ಸಂಪೂರ್ಣವಾಗಿ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. 2005ರಲ್ಲಿ ಮಾಫಿಯಾ ಡಾನ್ ಅತಿಕ್ ಅಹಮದ್ ಎಂಬಾತ ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್ ಅವರನ್ನು ಹತ್ಯೆ ಮಾಡಿದ್ದ. ಈ ಪ್ರಕರಣದಲ್ಲಿ ಉಮೇಶ್ ಪಾಲ್ ಪ್ರಮುಖ ಸಾಕ್ಷಿಯಾಗಿದ್ದ ಕಾರಣ ಅವರನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.