ತಮ್ಮ ಕಾರನ್ನು ಹೊರಗೆ ನಿಲ್ಲಿಸುವಂತೆ ಸೂಚಿಸಿದ ಸೆಕ್ಯುರಿಟಿ ಗಾರ್ಡ್ ಗೆ ಕಪಾಳಮೋಕ್ಷ ಮಾಡಿದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿರುದ್ಧ ತನಿಖೆಗೆ ಸೂಚಿಸಲಾಗಿದೆ.
ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ರೆಸಿಡೆನ್ಶಿಯಲ್ ಸೊಸೈಟಿಯೊಂದರ ಸೆಕ್ಯುರಿಟಿ ಗಾರ್ಡ್ ಗೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕಪಾಳಮೋಕ್ಷ ಮಾಡಿದ್ದರು. ಸಿಸಿ ಕ್ಯಾಮೆರಾದಲ್ಲಿ ಘಟನೆ ಸೆರೆಯಾಗಿದ್ದು, ವ್ಯಾಪಕವಾಗಿ ಹರಡಿದ ನಂತರ ಸಬ್ ಇನ್‌ಸ್ಪೆಕ್ಟರ್ ಕಪಿಲ್ ಬಲಿಯಾನ್ ವಿರುದ್ಧ ತನಿಖೆ ಶುರುವಾಗಿದೆ.
ಸೋಮವಾರ ನಸುಕಿನ ವೇಳೆ ಗ್ರೇಟರ್ ನೋಯ್ಡಾ ಲಾ ರೆಸಿಡೆನ್ಶಿಯಾ ಸೊಸೈಟಿಯಲ್ಲಿ ಈ ಘಟನೆ ನಡೆದಿದೆ. ನೋಯ್ಡಾದ ಮೂರನೇ ಹಂತದ ಪೊಲೀಸ್ ಠಾಣೆಯಲ್ಲಿ ನಿಯೋಜಿತರಾಗಿರುವ ಸಬ್-ಇನ್‌ಸ್ಪೆಕ್ಟರ್ ಕಪಿಲ್ ಬಲಿಯಾನ್ ಅವರು ತಮ್ಮ ಕಾರಿನ ಮೇಲೆ ಮಾನ್ಯವಾದ ಸ್ಟಿಕ್ಕರ್ ಇಲ್ಲದೆ ಲಾ ರೆಸಿಡೆನ್ಶಿಯಾ ಸೊಸೈಟಿ ಪ್ರವೇಶಿಸಲು ಮುಂದಾದರು. ಈ ವೇಳೆ ಭದ್ರತಾ ಸಿಬ್ಬಂದಿ ಕುಲದೀಪ್ ಸಿಂಗ್ ಕಾರ್ ಮೇಲೆ ಮಾನ್ಯ ಮಾಡಿರುವ ಸ್ಟಿಕರ್ ಇಲ್ಲ, ಹೀಗಾಗಿ ಕಾರನ್ನು ಹೊರಗೆ ನಿಲ್ಲಿಸುವಂತೆ ಹೇಳಿದರು. ಇದಕ್ಕೆ ಕೆರಳಿದ ಸಬ್ ಇನ್ಸ್ ಪೆಕ್ಟರ್ ಸೆಕ್ಯುರಿಟಿ ಗಾರ್ಡ್ ಮೇಲೆ ಕಪಾಳಮೋಕ್ಷ ಮಾಡಿದರು.
“ನಿಯಮಗಳ ಪ್ರಕಾರ, ಮಾನ್ಯ ಸ್ಟಿಕ್ಕರ್ ಇಲ್ಲದ ಯಾವುದೇ ವಾಹನವನ್ನು ಸೊಸೈಟಿಯೊಳಗೆ ಅನುಮತಿಸಲಾಗುವುದಿಲ್ಲ. ಹಾಗಾಗಿ ನಾನು ನಿಯಮದ ಪ್ರಕಾರ ಕಾರನ್ನು ಹೊರಗೆ ನಿಲ್ಲಿಸಲು ನಯವಾಗಿ ಕೇಳಿದೆ. ಆದರೆ ಅವರು ನನ್ನ ಮೇಲೆ ಕೋಪಗೊಂಡು ಕಾರಿನಿಂದ ಇಳಿದು ಕಪಾಳಮೋಕ್ಷ ಮಾಡಲು ಪ್ರಾರಂಭಿಸಿದರು” ಎಂದು ಸೆಕ್ಯುರಿಟಿ ಗಾರ್ಡ್ ಕುಲದೀಪ್ ಸಿಂಗ್ ಹೇಳಿದ್ದಾರೆ. ಸಬ್ ಇನ್ಸ್ ಪೆಕ್ಟರ್ ಕಪಿಲ್ ಬಲಿಯಾನ್ ಲಾ ರೆಸಿಡೆನ್ಶಿಯಾ ಸೊಸೈಟಿಯೊಳಗೆ ಬಾಡಿಗೆ ಫ್ಲಾಟ್ ವೊಂದರಲ್ಲಿ ವಾಸಿಸುತ್ತಿದ್ದಾರೆ.
ಘಟನೆ ಬಳಿಕ ಇಬ್ಬರೂ ಮಾತುಕತೆ ಮೂಲಕ ಒಪ್ಪಂದಕ್ಕೆ ಬಂದು ಪ್ರಕರಣ ಉಲ್ಬಣವಾಗದಂತೆ ಇದ್ದರು. ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದ್ದ ಘಟನೆಯ ವಿಡಿಯೋ ವೈರಲ್ ಆದ ನಂತರ ಸೆಂಟ್ರಲ್ ನೋಯ್ಡಾದ ಉಪ ಪೊಲೀಸ್ ಆಯುಕ್ತರು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ಅನೇಕ ರೆಸಿಡೆನ್ಷಿಯಲ್ ಕಲ್ಯಾಣ ಸಂಘಗಳು ಸಬ್ ಇನ್ಸ್ ಪೆಕ್ಟರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿವೆ.