ತನ್ನ ಕಾರನ್ನು ಮುಟ್ಟಿದನೆಂಬ ಕ್ಷುಲ್ಲಕ ಕಾರಣಕ್ಕೆ ಅದರ ಮಾಲೀಕ ಆರು ವರ್ಷದ ಬಾಲಕನಿಗೆ ಕಾಲಿನಿಂದ ಒದ್ದಿರುವ ಅಮಾನವೀಯ ಘಟನೆ ಕೇರಳದಲ್ಲಿ ನಡೆದಿದ್ದು, ಈ ಆಘಾತಕಾರಿ ದೃಶ್ಯ ಸನಿಹದಲ್ಲಿ ಅಳವಡಿಸಲಾಗಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಗುರುವಾರ ಸಂಜೆ, ಕಣ್ಣೂರಿನ ತಲಸ್ಸೇರಿ ನಗರದಲ್ಲಿ ಈ ಘಟನೆ ನಡೆದಿದ್ದು, ಬಾಲಕ ನಿಲ್ಲಿಸಿದ್ದ ಕಾರಿನ ಮೇಲೆ ಕೈ ಇಟ್ಟು ಒರಗಿ ನಿಂತಿದ್ದ. ಈ ವೇಳೆ ಏಕಾಏಕಿ ಬಂದ ಕಾರಿನ ಮಾಲೀಕ ಕಾಲಿನಿಂದ ಆತನಿಗೆ ಒದ್ದಿದ್ದಾನೆ.
ಕೂಡಲೇ ಸ್ಥಳೀಯರು ಸುತ್ತುವರಿದು ಕಾರು ಮಾಲೀಕನಿಗೆ ತರಾಟೆಗೆ ತೆಗೆದುಕೊಂಡಿದ್ದು, ಈ ವೇಳೆ ಆತ ಬಾಲಕ ಕಾರಿನ ಬಾಗಿಲು ತೆರೆಯಲು ಯತ್ನಿಸುತ್ತಿದ್ದ ಎಂದು ಆರೋಪಿಸಿದ್ದಾನೆ. ಆದರೆ ವಿಡಿಯೋ ಪರಿಶೀಲಿಸಿದ ವೇಳೆ ಬಾಲಕ ಅಂತಹ ಯಾವುದೇ ಪ್ರಯತ್ನ ಮಾಡಿರುವುದು ಕಂಡುಬಂದಿಲ್ಲ.
ಆರೋಪಿಯನ್ನು ಮಹಮ್ಮದ್ ಶಿಷಾದ್ ಎಂದು ಹೇಳಲಾಗಿದ್ದು, ವಿಡಿಯೋ ವೈರಲ್ ಆದ ಬಳಿಕ ನೆಟ್ಟಿಗರು ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಮೊದಲಿಗೆ ಆತನ ವಿರುದ್ಧ ಪ್ರಕರಣ ದಾಖಲಿಸಲು ನಿರಾಕರಿಸಿದ ಪೊಲೀಸರು ಒತ್ತಡ ಹೆಚ್ಚಿದಾಗ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.