
ಲಖ್ನೋ: ಉತ್ತರಪ್ರದೇಶದಲ್ಲಿ ನಡೆದ ಭಯಾನಕ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಅಪ್ರಾಪ್ತ ಮಗಳ ಶಿರಚ್ಛೇದ ಮಾಡಿದ್ದಾನೆ.
ಹರದೋಯಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಕತ್ತರಿಸಿದ ಮಗಳ ತಲೆಯನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. 17 ವರ್ಷದ ಅಪ್ರಾಪ್ತೆ ಅಫೇರ್ ಹೊಂದಿದ್ದೆ ಕೊಲೆಗೆ ಕಾರಣವೆನ್ನಲಾಗಿದೆ.
ಹರದೋಯಿ ಜಿಲ್ಲೆಯ ಮಾಜ್ ಹಿಲಾ ಪೊಲೀಸ್ ಠಾಣೆ ವ್ಯಾಪ್ತಿಯ ಪಾಂಡೈತಾರಾ ಗ್ರಾಮದ ನಿವಾಸಿ ಸರ್ವೇಶ್ ಕುಮಾರ್ ಇಂತಹ ಕೃತ್ಯವೆಸಗಿದ ಆರೋಪಿ. ಬುಧವಾರ ಮಧ್ಯಾಹ್ನ 3 ಗಂಟೆಗೆ ಹರಿತವಾದ ಆಯುಧದಿಂದ 17 ವರ್ಷದ ಮಗಳ ಶಿರಚ್ಛೇದ ಮಾಡಿದ್ದಾನೆ. ಕತ್ತರಿಸಿದ ಮಗಳ ತಲೆಯೊಂದಿಗೆ ಎರಡು ಕಿಲೋಮೀಟರ್ ದೂರದ ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ. ಈ ಪ್ರದೇಶದ ಜನರು ಘಟನೆಯಿಂದ ಬೆಚ್ಚಿಬಿದ್ದಿದ್ದಾರೆ.
ತರಕಾರಿ ಮಾರಾಟ ಮಾಡುವ ಸರ್ವೇಶ್ ಕುಮಾರ್ ಮಗಳು ಯುವಕನೊಂದಿಗೆ ಸಂಬಂಧ ಹೊಂದಿದ್ದು, ಆತನೊಂದಿಗೆ ಇದ್ದಾಗಲೇ ಸಿಕ್ಕಿಬಿದ್ದಿದ್ದಳು. ಇದೇ ಕೊಲೆಗೆ ಕಾರಣವೆನ್ನಲಾಗಿದೆ, ಮಗಳ ಮೇಲೆ ಆಕ್ರೋಶಗೊಂಡಿದ್ದ ಸರ್ವೇಶ್ ಕುಮಾರ್ ಇಂತಹ ಕೃತ್ಯವೆಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.