ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಕಳೆದುಕೊಂಡರೂ ಪರವಾಗಿಲ್ಲ, ಜಾತಿ ಗಣತಿ ವರದಿ ಬಿಡುಗಡೆಯಾಗಲಿ ಎಂದು ಸಿದ್ಧರಾಮಾನಂದ ಶ್ರೀ ಮನವಿ ಮಾಡಿದ್ದಾರೆ.
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿಗಣತಿ ವರದಿ ಬಿಡುಗಡೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದ್ದರು. ಈಗ ಯಾಕೆ ವರದಿ ಬಿಡುಗಡೆ ಮಾಡಲು ಮೀನಮೇಷ ಎಣಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಎದುರೇ ಈ ಬಗ್ಗೆ ಪ್ರಸ್ತಾಪಿಸಿದ ಸ್ವಾಮೀಜಿ, ಕೂಡಲೇ ಜಾತಿ ಗಣತಿ ವರದಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಭಂಜನಾಚಾರ್ಯರು ಹಾಡಿ ಹೊಗಳಿದ್ದಾರೆ, ಕನಕದಾಸರು ಚಿನ್ನಕ್ಕಿಂತ ಅನ್ನಕ್ಕೆ ಹೆಚ್ಚು ಮಹತ್ವ ಕೊಟ್ಟವರು. ತಮಗೆ ಸಿಕ್ಕ ಅವಕಾಶದಲ್ಲಿ ಜನರಿಗೆ ಅನ್ನವನ್ನು ಉಣಿಸಿದವರು. ಅದೇ ರೀತಿ ಸಿದ್ದರಾಮಯ್ಯ ಅನ್ನಭಾಗ್ಯ ಜಾರಿ ಮಾಡಿದರು. ಅನ್ನಭಾಗ್ಯದ ಮೂಲಕ ಹಸಿವು ನೀಗಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಜಾರಿ ಮಾಡಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮ ನಾಡನ್ನು ಚಿನ್ನದ ನಾಡು ಎನ್ನುತ್ತಾರೆ. ಇಂತಹ ನಾಡನ್ನು ಯಶಸ್ವಿಯಾಗಿ ಸಿದ್ದರಾಮಯ್ಯ ಮುನ್ನಡೆಸುತ್ತಿದ್ದಾರೆ. ಕನಕದಾಸರು ಜ್ಞಾನದ ಮೂಲಕ ಎಲ್ಲಾ ಸಮುದಾಯ ತಲುಪಿದ್ದಾರೆ. ಅಲ್ಲದೆ ಸಮುದಾಯವನ್ನು ಮೇಲಕ್ಕೆ ಎತ್ತಿದವರು ಕನಕದಾಸರು. ಅದರ ಪ್ರತಿರೂಪವೇ ಇವತ್ತು ಸಿದ್ದರಾಮಯ್ಯ ಸಿಎಂ ಆಗಿದ್ದಾರೆ ಎಂದು ಹೇಳಿದ್ದಾರೆ.