alex Certify BIG NEWS: ಜಾತಿ ಗಣತಿ ವರದಿ ಜಾರಿ ಬಗ್ಗೆ ಸಿಎಂ ಸಿದ್ಧರಾಮಯ್ಯ ಮಹತ್ವದ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಜಾತಿ ಗಣತಿ ವರದಿ ಜಾರಿ ಬಗ್ಗೆ ಸಿಎಂ ಸಿದ್ಧರಾಮಯ್ಯ ಮಹತ್ವದ ಹೇಳಿಕೆ

ದಾವಣಗೆರೆ: ಕನಕದಾಸರು ಆಕಸ್ಮಿಕವಾಗಿ ಕುರುಬ ಜಾತಿಯಲ್ಲಿ ಹುಟ್ಟಿದ ಜಾತ್ಯತೀತ ದಾರ್ಶನಿಕ ಹಾಗೂ ಮಹಾನ್ ಸಂತ. ಕುರುಬ ಜಾತಿಯಲ್ಲಿ ಹುಟ್ಟಿ ಜಾತಿ ರಹಿತ ಸಮ‌ಸಮಾಜಕ್ಕಾಗಿ ಹೋರಾಡಿದ, ಜಾತ್ಯತೀತ ಸಂತ. ಮನುಕುಲದ ಏಳೆಗೆಗಾಗಿ ಶ್ರಮಿಸಿದ ಅವರು ದಾಸ ಶ್ರೇಷ್ಠರಾದರು ಎಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ.

ದಾವಣಗೆರೆಯಲ್ಲಿ ಆಯೋಜಿಸಿದ್ದ 537ನೇ ಕನಕ ಜಯಂತಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಶರಣ ಸಾಹಿತ್ಯದಲ್ಲಿ ಅಣ್ಣ ಬಸವಣ್ಣ, ದಾಸ ಸಾಹಿತ್ಯದಲ್ಲಿ ಕನಕದಾಸರು ಅತ್ಯಂತ ಪ್ರಮುಖರು. ಬುದ್ಧನಿಂದ ಕನಕದಾಸರವರೆಗೂ, ಆ ನಂತರವೂ ಬಹಳ ಪುಣ್ಯಾತ್ಮರು ಜಾತಿರಹಿತ ಸಮಾಜಕ್ಕಾಗಿ ಶ್ರಮಿಸಿದ್ದಾರೆ. ಅಂಬೇಡ್ಕರ್, ನಾರಾಯಣಗುರು ಮತ್ತು ಕನಕದಾಸರು ಕೂಡ ಜಾತಿ ವ್ಯವಸ್ಥೆ, ವರ್ಣ ವ್ಯವಸ್ಥೆಯ ಕಾರಣಕ್ಕೆ ಅವಮಾನಿತರಾಗಿದ್ದರು. ಯಾರೂ ಜನ್ಮತಃ ದಡ್ಡರಾಗಿರಲು ಸಾಧ್ಯವಿಲ್ಲ. ಕಾಳಿದಾಸರು ಶಾಕುಂತಲಾ ಬರೆದದ್ದು, ವ್ಯಾಸರು ಮಹಾಭಾರತ ಬರೆದದ್ದು, ವಾಲ್ಮೀಕಿ ರಾಮಾಯಣ ಬರೆದದ್ದೇ ಹುಟ್ಟಿನಿಂದ ಯಾರೂ ದಡ್ಡರಲ್ಲ ಎನ್ನುವುದಕ್ಕೆ ಉದಾಹರಣೆಯಾಗಿದೆ ಎಂದರು.

ಪ್ರಜಾಪ್ರಭುತ್ವದಲ್ಲಿ ಒಬ್ಬರಿಗೆ ಒಂದೇ ಮತ. ಎಲ್ಲಾ ಜಾತಿ, ಧರ್ಮ, ಅಂತಸ್ತಿವರಿಗೂ ಒಂದೇ ಮತ. ಈ ಸಮಾನತೆ ಆರ್ಥಿಕವಾಗಿ, ಸಾಮಾಜಿಕವಾಗಿಯೂ ಜಾರಿ ಆಗಬೇಕು. ಆಗ ಮಾತ್ರ ಸಮಸಮಾಜದ ದಿಕ್ಕಿನಲ್ಲಿ ನಾವು ಮುನ್ನಡೆಯಲು ಸಾಧ್ಯ. ಯಾವ ಧರ್ಮದಲ್ಲೂ ಮನುಷ್ಯ ತಾರತಮ್ಯ ಇಲ್ಲ. ಧರ್ಮವನ್ನು ರಾಜಕೀಯವಾಗಿ ಬಳಸಿಕೊಳ್ಳುವವರು ತಮ್ಮ ಲಾಭಕ್ಕಾಗಿ ತಾರತಮ್ಯ, ದ್ವೇಷ ಸೃಷ್ಟಿಸುತ್ತಾರೆ ಎಂದರು.

ಶೋಷಿತ ಸಮುದಾಯಗಳು ಜಾತಿ ಸಮ್ಮೇಳನ ಮಾಡುವುದು ತಪ್ಪಲ್ಲ. ಆದರೆ ಮುಂದುವರೆದ ಜಾತಿಗಳು ಜಾತಿ ಹೆಸರಲ್ಲಿ ಸಮ್ಮೇಳನ ನಡೆಸುವುದು ಸಾಮಾಜಕವಾಗಿ ತಪ್ಪಾಗುತ್ತದೆ. ಸಂಘಟನೆ-ಒಗ್ಗಟ್ಟು ಇಲ್ಲದಿದ್ದರೆ ಶೋಷಿತ ಸಮುದಾಯಗಳಿಗೆ ಶಕ್ತಿ ಬರುವುದಿಲ್ಲ ಎಂದು ಹೇಳಿದ್ದಾರೆ.

ನಾನು ಎಲ್ಲಾ ಜಾತಿಯವರನ್ನೂ ಪ್ರೀತಿಸುತ್ತೇನೆ. ಆದರೆ ಜಾತಿ ಮಾಡುವವರನ್ನು ನಾನು ವಿರೋಧಿಸುತ್ತೇನೆಯೇ ಹೊರತು ಅವರನ್ನು ದ್ವೇಷಿಸುವುದಿಲ್ಲ. ಜಾತಿ ಕಾರಣದಿಂದ ಕನಕದಾಸರನ್ನು ಉಡುಪಿ ಮಠದ ಒಳಗೆ ಬಿಡಲಿಲ್ಲ. ಕೊನೆಗೆ ಸ್ವತಃ ಕೃಷ್ಣನೇ ಅವರಿಗೆ ದರ್ಶನ ನೀಡಿದ. ಕನಕದಾಸರ 500ನೇ ಜಯಂತಿಯನ್ನು ನಾನು ಸಾರಿಗೆ ಸಚಿವನಾಗಿದ್ದಾಗ ಆಗಿನ ಎಸ್.ಆರ್.ಬೊಮ್ಮಾಯಿ ಸರ್ಕಾರದಲ್ಲಿ ಆರಂಭಿಸಿದೆವು. ಬಳಿಕ ಇಡೀ ರಾಜ್ಯ ಪ್ರವಾಸ ಮಾಡಿ ಕಾಗಿನೆಲೆ ಗುರುಪೀಠವನ್ನು, ಮಠವನ್ನು ಸ್ಥಾಪಿಸಿದೆ. ಆದ್ದರಿಂದ ಇಡೀ ಸಮುದಾಯ ಒಟ್ಟಾಗಿ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ನಾನು ಜಾತಿ ಜನಗಣತಿ ಪರವಾಗಿ ಇದ್ದೇನೆ. ಕಾಂತರಾಜ ಅವರ ವರದಿಯನ್ನು ಮುಂದಿನ ಕ್ಯಾಬಿನೆಟ್ ನಲ್ಲಿ ಇಟ್ಟು ಚರ್ಚಿಸುವ ಉದ್ದೇಶ ಕೂಡ ಇದೆ. ನನಗೆ ನನ್ನ ಮುಂದಿನ ದಾರಿಯ ಬಗ್ಗೆ ಸ್ಪಷ್ಟತೆ ಇದೆ. ಬಸವಣ್ಣ-ಅಂಬೇಡ್ಕರ್-ಕನಕದಾಸರ ಹಾದಿಯಲ್ಲಿ ನಡೆಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...