ಮುಂಬೈ: ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ 25 ಲಕ್ಷ ಆರೋಗ್ಯ ವಿಮೆ, ಜಾತಿ ಗಣತಿ ಮತ್ತು ರಾಜ್ಯದ ಜನರಿಗೆ ನಿರುದ್ಯೋಗ ಭತ್ಯೆ ಸೇರಿದಂತೆ ಐದು ಗ್ಯಾರಂಟಿಗಳನ್ನು ಘೋಷಿಸಿದೆ.
ಮುಂಬೈನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಹಾರಾಷ್ಟ್ರದ ಮಹಿಳೆಯರಿಗೆ ಮಹಾಲಕ್ಷ್ಮಿ ಯೋಜನೆಯಡಿ ತಮ್ಮ ಪಕ್ಷವು ತಿಂಗಳಿಗೆ 3,000 ರೂ. ನೀಡಲಿದೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್‌ನ ಐದು ಭರವಸೆಗಳಲ್ಲಿ 25 ಲಕ್ಷ ರೂ. ಆರೋಗ್ಯ ವಿಮೆ, ಜನತೆಗೆ ಉಚಿತ ಔಷಧಗಳು, ಹೆಣ್ಣುಮಕ್ಕಳಿಗೆ ಮತ್ತು ಮಹಿಳೆಯರಿಗೆ ಉಚಿತ ಬಸ್ ಸೇವೆ ಸೇರಿವೆ. ಮಹಾಲಕ್ಷ್ಮಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಮಾಸಿಕ 3,000 ರೂ., ನಿರುದ್ಯೋಗಿ ಯುವಕರಿಗೆ 4,000 ರೂ. ಭತ್ಯೆ ಸಿಗಲಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ಕರ್ನಾಟಕ ಮತ್ತು ತೆಲಂಗಾಣ ರಾಜ್ಯಗಳಂತೆಯೇ ರಾಜ್ಯದಲ್ಲಿಯೂ ಜಾತಿ ಗಣತಿ ನಡೆಸುವ ಬಗ್ಗೆ ಕಾಂಗ್ರೆಸ್ ಭರವಸೆ ನೀಡಿದೆ. 50% ಮೀಸಲಾತಿ ತಡೆಯನ್ನು ತೆಗೆದುಹಾಕುವ ಭರವಸೆಯನ್ನೂ ನೀಡಲಾಗಿದೆ.
ರೈತರ ಸಾಲ ಮನ್ನಾ: NCP ಭರವಸೆ
ವಿರೋಧ ಪಕ್ಷದ ಮೈತ್ರಿಕೂಟ ಅಧಿಕಾರಕ್ಕೆ ಬಂದ ನಂತರ ಮಹಾರಾಷ್ಟ್ರದಲ್ಲಿ ಕೃಷಿ ಸಮೃದ್ಧಿ ಯೋಜನೆಯಡಿ 3 ಲಕ್ಷ ರೂ.ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಮಹಾ ವಿಕಾಸ್ ಅಘಾಡಿ ಮೈತ್ರಿಕೂಟದ ಎನ್‌ಸಿಪಿ(ಎಸ್‌ಪಿ) ನಾಯಕ ಶರದ್ ಪವಾರ್ ಹೇಳಿದ್ದಾರೆ.