ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಮಹಾರಾಷ್ಟ್ರದಲ್ಲಿ ಮತದಾನ ನಡೆಯಲಿದೆ. ಈ ನಡುವೆ ಬಿಜೆಪಿ ನಾಯಕರಿಂದ ಕರ್ಯಕರ್ತರಿಗೆ ಭಾರಿ ಪ್ರಮಾಣದಲ್ಲಿ ಹಣ ಹಂಚಿಕೆ ಮಾಡಲಾಗುತ್ತಿರುವ ಆರೋಪ ಕೇಳಿಬಂದಿದೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆ ತಾವು ತಂಗಿದ್ದ ವಿರಾರ್ ನ ಹೋಟೆಲ್ ನಲ್ಲಿ ಕಾರ್ಯಕರ್ತರಿಗೆ 5 ಕೋಟಿ ರೂಪಾಯಿ ಹಣ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಬಹುಜನ ವಿಕಾಸ್ ಅಘಾಡಿ ಪಕ್ಷದ ಕಾರ್ಯಕರ್ತರು ಹೋಟೆಲ್ ಮೇಲೆ ದಾಳಿ ನಡೆಸಿದ್ದು, ಹಣ ಹಂಚುತ್ತಿರುವುದುದನ್ನು ಪತ್ತೆ ಮಾಡಿ ನೋಟುಗಳ ಸಮೇತ ಕ್ಯಾಮರಾಗಳಿಗೆ ಪ್ರದರ್ಶಿಸಿದ್ದಾರೆ.
ವಿನೋದ್ ತಾವಡೆ ಬಳಿ ಹಣ ಹಂಚಿಕೆ ಮಾಡಿರುವ ಬಗ್ಗೆ ಉಲ್ಲೇಖವಿರುವ ಡೈರಿ ಕೂಡ ಪತ್ತೆಯಾಗಿದೆ. ಮತದಾರರನ್ನು ಸೆಳೆಯಲು ಈ ರೀತಿ ಹಣ ಹಂಚಿಕೆ ಮಾಡುತ್ತಿರುವ ವಿನೋದ್ ತಾವಡೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಹುಜನ ವಿಕಾಸ್ ಅಘಾಡಿ ಪಕ್ಷದ ಸದಸ್ಯರು ಹೋಟೆಲ್ ನಲ್ಲಿ ದಾಳಿ ನಡೆಸುತ್ತಿದ್ದಂತೆ, ಬಿಜೆಪಿ ಇತರ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದ್ದು, ಉಭಯ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದೆ. ಇದೇ ವೇಳೆ ಪೊಲಿಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.