
ಮಂಡ್ಯ: ನೆರೆ ಸಂತ್ರಸ್ತರಿಗೆ 10 ಸಾವಿರ ರೂಪಾಯಿ ನಗದು, ಅಕ್ಕಿ, ಬೇಳೆ, ಸಕ್ಕರೆ ನೀಡಲು ಯೋಜನೆ ಜಾರಿಗೆ ಸರ್ಕಾರ ಉದ್ದೇಶಿಸಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಮದ್ದೂರು ತಾಲೂಕಿನ ಸೋಮನಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೆರೆಹಾವಳಿಯಿಂದ ಸಂಕಷ್ಟದಲ್ಲಿರುವ ಸಂತ್ರಸ್ತರಿಗೆ ಆಹಾರದ ಕಿಟ್ ವಿತರಿಸಲು ಹೊಸ ಯೋಜನೆ ಜಾರಿಗೆ ಸರ್ಕಾರ ಉದ್ದೇಶಿಸಿದೆ. ನೆರೆ ಸಂತ್ರಸ್ತರಿಗೆ 15 ದಿನಗಳಿಗೊಮ್ಮೆ 10 ಕೆಜಿ ಅಕ್ಕಿ, ಸಕ್ಕರೆ, ಬೇಳೆ ಆಹಾರದ ಕಿಟ್, 10,000 ರೂ. ನೀಡಲು ಚಿಂತನೆ ನಡೆದಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಅತಿವೃಷ್ಟಿ ಉಂಟಾದಾಗ ಗಂಜಿ ಕೇಂದ್ರಗಳನ್ನು ಆರಂಭಿಸಿ ಗಂಜಿ ಮಾತ್ರ ನೀಡಲಾಗುತ್ತಿತ್ತು. ಬಿಜೆಪಿ ಸರ್ಕಾರ ಕಾಳಜಿ ಕೇಂದ್ರಗಳೆಂದು ನಾಮಕರಣ ಮಾಡಿ ಆಹಾರದ ಕಿಟ್ ನೀಡಲು ನಿರ್ಧರಿಸಿದೆ. ಕಾಳಜಿ ಕೇಂದ್ರಗಳಲ್ಲಿ ಸಂತ್ರಸ್ತರಿಗೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಸಂಬಂಧಿಕರ ಮನೆಗಳಲ್ಲಿ ಇರುವ ಸಂತ್ರಸ್ತರಿಗೆ ಆಹಾರದ ಕಿಟ್ ನೀಡಲಾಗುವುದು ಎಂದು ತಿಳಿಸಿದ್ದಾರೆ.